ಚಂಬಲ್ ನದಿಯಲ್ಲಿ ದೋಣಿ ಮುಳುಗಿ 12 ಭಕ್ತರ ಕಣ್ಮರೆ

ಈ ಸುದ್ದಿಯನ್ನು ಶೇರ್ ಮಾಡಿ

ಕೋಟಾ, ಸೆ.16-ಸುಮಾರು 50 ಭಕ್ತರಿದ್ದ ದೋಣಿಯೊಂದು ಮುಳುಗಿ 12 ಮಂದಿ ನಾಪತ್ತೆಯಾಗಿರುವ ಘಟನೆ ರಾಜಸ್ತಾನದ ಕೋಟಾ ಜಿಲ್ಲೆಯ ಚಂಬಲ್ ನದಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.  15 ಭಕ್ತರನ್ನು ರಕ್ಷಿಸಲಾಗಿದೆ.

ಸುಮಾರು 20 ಜನ ಈಜಿ ದಡ ಸೇರಿದ್ದಾರೆ. ಉಳಿದವರಿಗಾಗಿ ತೀವ್ರ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಪತ್ತೆಯಾಗಿರುವ 12 ಜನರಲ್ಲಿ ಮಕ್ಕಳು ಮತ್ತು ಮಹಿಳೆಯರೂ ಸೇರಿದ್ದಾರೆ.

ಕೋಟಾ ಜಿಲ್ಲೆಯ ಖಟೋಲಿ ಪೊಲೀಸ್ ಠಾಣೆ ವ್ಯಾಪ್ತಿ ಧಿಬ್ರಿ ಚಂಬಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಬಂಡಿ ಜಿಲ್ಲೆಯ ಇಂದರ್‍ಗಢ್ ಪ್ರದೇಶದಲ್ಲಿ ದೇವಸ್ಥಾನಕ್ಕೆ ಸುಮಾರು 40ಕ್ಕೂ ಹೆಚ್ಚು ಭಕ್ತರು ದೋಣಿಯಲ್ಲಿ ತೆರಳುತ್ತಿದ್ದರು. ಇಂದು ಬೆಳಗ್ಗೆ 8.15ರ ಸಮಯದಲ್ಲಿ ದೋಣಿ ಮುಳುಗಿತು ಎಂದು ಕೋಟಾ ಗ್ರಾಮಾಂತರ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿ ಶರದ್ ಚೌಧರಿ ತಿಳಿಸಿದ್ದಾರೆ.

ಖಟೋಲಿ ಮತ್ತು ಸುತ್ತಮುತ್ತಲ ಗ್ರಾಮದ ಭಕ್ತರು ಕಮಲೇಶ್ವರ್ ಮಹದೇವ್ ದೇಗುಲದಲ್ಲಿ ಮಹಾದೇವನ ದರ್ಶನಕ್ಕಾಗಿ ದೋಣಿಯಲ್ಲಿ ತೆರಳುತ್ತಿದ್ಧಾಗ ಈ ಘಟನೆ ಸಂಭವಿಸಿದೆ. ಕಣ್ಮರೆಯಾದವರಿಗಾಗಿ ತೀವ್ರ ಶೋಧ ಮುಂದುವರಿದಿದ್ದು, ಜಿಲ್ಲಾ ಕಲೆಕ್ಟರ್ ನೇತೃತ್ವದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆದಯುತ್ತಿವೆ.

Facebook Comments