2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಪ್ರಣಯ ಪಕ್ಷಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಖುಲ್ಲಾ ಖುಲ್ಲಾ ಲವ್ ಮಾಡು ಒಮ್ಮೆ ನನ್ನನ್ನ ಆರ್ ಯು ರೆಡಿ ಎಂದು ಕೇಳುತ್ತಿದ್ದ ಬಾಲಿವುಡ್ ಮಂದಿ ಹಾಗೂ ಕ್ರಿಕೆಟ್ ಕಲಿಗಳು ಈಗ ಮದುವೆಯಾಗುವತ್ತ ಮುಖ ಮಾಡಿದ್ದಾರೆ. 2019ರಲ್ಲಿ ಮನೀಷ್‍ಪಾಂಡೆ- ಆಶ್ರೀತಾಶೆಟ್ಟಿ ಮದುವೆಯಾಗಿದ್ದರೆ, 2020ರಲ್ಲಿ ಕ್ರಿಕೆಟಿಗರಾದ ಕೆ.ಎಲ್.ರಾಹುಲ್- ಅತ್ರೀಯಾಶೆಟ್ಟಿ, ಹಾರ್ದಿಕ್ ಪಾಂಡ್ಯಾ- ನತಾಶಾ ಹಸೆಮಣೆ ಏರಲು ಅಣಿಯಾಗಿದ್ದಾರೆ. ಇತ್ತ ರಣಬೀರ್ ಕಪೂರ್- ಆಲಿಯಾಭಟ್, ಕತ್ರೀನಾ ಕೈಫ್- ವಿಕ್ಕಿ ಕೌಶಲ್ ಜೋಡಿಯು ನವ ಜೀವನಕ್ಕೆ ಅಡಿಯಿಡಲಿದ್ದಾರೆ.

#ರಣಬೀರ್- ಅಲಿಯಾ
ಬಾಲಿವುಡ್‍ನ ಸ್ಟಾರ್ ನಟಿಯರಾದ ದೀಪಿಕಾಪಡುಕೋಣೆ, ಕತ್ರೀನಾಕೈಫ್‍ರ ಮೋಹದ ಬಲೆಯಿಂದ ಹೊರಬಂದ ನಂತರ ಆಲಿಯಾಭಟ್‍ರ ಸಖ್ಯದಲ್ಲಿರುವ ರಣಬೀರ್ ಈಗ ಆಕೆಯೊಂದಿಗೆ ನ್ಯೂಯಾರ್ಕ್‍ನಲ್ಲಿ ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಆಚರಣೆ ಮಾಡಿದ್ದಾರೆ. ಈ ಜೋಡಿಯ ಮದುವೆಯು ಬಿಗ್‍ಟೌನ್‍ನಲ್ಲಿ ಜೋರು ಸದ್ದು ಮಾಡಿದೆ.

#ಕತ್ರೀನಾ-ವಿಕ್ಕಿ ಕೌಶಲ್
ಬಾಲಿವುಡ್‍ನ ಬ್ಯಾಡ್‍ಬಾಯ್ ಸಲ್ಲುಮಿಯಾ ಹಾಗೂ ರಣಬೀರ್ ಕಪೂರ್‍ರ ಪ್ರೇಮ ಪಾಶದಿಂದ ಬಿಡಿಸಿಕೊಂಡ ನಂತರ ಕ್ಯಾಟ್ (ಕತ್ರೀನಾ) ಉರಿ ಚಿತ್ರದ ನಾಯಕ ವಿಕ್ಕಿಯ ಹೃದಯಕ್ಕೆ ಲಜ್ಜೆ ಇಟ್ಟಿದ್ದು, ಈಗ ಆ ಜೋಡಿಯು ವಿವಾಹ ವಾಗುವ ಹಂತಕ್ಕೆ ಬಂದಿದೆ ಎಂಬ ಗುಲ್ಲು ಕೂಡ ಬಿಗ್‍ಟೌನ್‍ನಲ್ಲಿ ಕೇಳಿಬರುತ್ತಿದೆ. ಆ ಸುದ್ದಿ ನಿಜವಾದರೆ ಕತ್ರೀನಾಗೆ ಈ ವರ್ಷವೇ ಕಂಕಣಭಾಗ್ಯ ಒಲಿದು ಬರಲಿದೆ.

#ವರುಣ್‍ಧವನ್- ನತಾಶಾ ದಲಾಳ್
ನ್ಯೂಜಿಲೆಂಡ್‍ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿರುವ ಸ್ಟೂಡೆಂಟ್ ಆಫ್ ದಿ ಇಯರ್ ನಟ ವರುಣ್‍ಧವನ್ ಹಾಗೂ ರೂಪದರ್ಶಿ ನತಾಶಾರ ಬಹು ದಿನಗಳ ಪ್ರೇಮದಾಟಕ್ಕೂ ಈ ವರ್ಷ ಬ್ರೇಕ್ ಬೀಳಲಿದ್ದು, ವಿವಾಹ ಜೀವನಕ್ಕೆ ಎಂಟ್ರಿ ಕೊಡಲು ನಿಶ್ಚಯಿಸಿದ್ದಾರೆ. ಸ್ವಿಡ್ಜರ್‍ಲ್ಯಾಂಡ್‍ನಲ್ಲಿ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾಶರ್ಮಾರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳು ಧವನ್ ಹಾಗೂ ನತಾಶರ ವಿವಾಹ ಸುದ್ದಿಯನ್ನು ದೃಢಪಡಿಸುವಂತಿದೆ.

#ಕೆ.ಎಲ್.ರಾಹುಲ್- ಅತೀಯಾ ಶೆಟ್ಟಿ
ಬಾಲಿವುಡ್ ನಟಿ ನಿಧಿ ಅಗರ್‍ವಾಲ್‍ರೊಂದಿಗೆ ಡೇಟಿಂಗ್ ನಡೆಸಿದ್ದ ಭಾರತ ತಂಡದ ಯುವ ಕ್ರಿಕೆಟಿಗ, ಕನ್ನಡಿಗ ಕೆ.ಎಲ್.ರಾಹುಲ್ ಈಗ ಕೆಲವು ತಿಂಗಳಿನಿಂದ ಬಾಲಿವುಡ್‍ನ ಹಿರಿಯ ನಟ ಸುನೀಲ್‍ಶೆಟ್ಟಿಯ ಪುತ್ರಿ ಅತೀಯಾಶೆಟ್ಟಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದು, ಇವರ ಮದುವೆಗೆ ಸುನೀಲ್‍ಶೆಟ್ಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅತೀಯಾಶೆಟ್ಟಿ ಹೀರೋ, ಮುಬಾರಕನ್ ಎಂಬ ಚಿತ್ರಗಳಲ್ಲಿ ನಟಿಸಿದ್ದು ಈ ವರ್ಷವೇ ಕೆ.ಎಲ್.ರಾಹುಲ್‍ರನ್ನು ವರಿಸಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.

#ಹಾರ್ದಿಕ್ ಪಾಂಡ್ಯಾ-ನತಾಶಾ
ಹೂವಿಂದ ಹೂವಿಗೆ ಹಾರುವ ದುಂಬಿಯಾಗಿರುವ ಹಾರ್ದಿಕ್ ಪಾಂಡ್ಯಾ ಬಾಲಿವುಡ್‍ನ ನಟೀಮಣಿಯರಾದ ಪರಿಣೀತಿ ಚೋಪ್ರಾ, ಲೀಸಾಶರ್ಮಾ, ಎಲ್ಲಿ ಅಮ್ರಾಮ್, ಈಶಾಗುಪ್ತಾ, ಊರ್ವಶಿ ರೌತೇಲಾರೊಂದಿಗೆ ಪ್ರೇಮಸಲ್ಲಾಪ ನಡೆಸಿದ ನಂತರ ಈಗ ಸರ್ಬಿಯಾದ ನಟಿ, ರೂಪದರ್ಶಿ ನತಾಶಾ ಸ್ಟ್ಯಾಂಕೋವಿಚ್‍ರನ್ನು ವರಿಸಲು ಮುಂದಾಗಿದ್ದಾರೆ.
ನತಾಶಾ ಸತ್ಯಾಗ್ರಹ, ಡ್ಯಾಡಿ ಎಂಬ ಬಾಲಿವುಡ್ ಚಿತ್ರಗಳಲ್ಲದೆ ದುನಿಯಾ ವಿಜಯ್ ನಟಿಸಿದ್ದ ದನಕಾಯೋನು ಚಿತ್ರದಲ್ಲೂ ನತಾಶಾ ಒಂದು ಹಾಡಿನಲ್ಲಿ ಮಿಂಚಿ ಹೋಗಿದ್ದು ಈಗ ಹಾರ್ದಿಕ್‍ನೊಂದಿಗೆ ರಿಂಗ್ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದು ಈ ವರ್ಷವೇ ಹಸೆಮಣೆ ಏರಲು ರೆಡಿಯಾಗಿದ್ದಾರೆ.

ಇನ್ನುಳಿದಂತೆ ಬಾಲಿವುಡ್ ಅಂಗಳದಲ್ಲಿ ಅರಳುತ್ತಿರುವ ಕುಸುಮಗಳಾದ ಅಯಾನ್ ಶೆಟ್ಟಿ- ತನ್ಯಾಶ್ರೋಫ್ ಕೂಡ ಗ್ರೀಸ್, ಇಟಲಿ, ಫ್ರಾನ್ಸ್‍ನಲ್ಲಿ ಜಾಲಿ ಟ್ರಿಪ್ ಮಾಡುತ್ತಿದ್ದು ಮದುವೆಯಾಗಲು ಸಮಯ ಬೇಕೆಂದು ಹೇಳಿಕೊಳ್ಳುತ್ತಿದ್ದಾರೆ. ಒಟ್ಟಾರೆ 2020ರಲ್ಲಿ ಬಾಲಿವುಡ್ ಅಂಗಳದಲ್ಲಿ ಮದುವೆಗಳ ಸಂಭ್ರಮವಂತೂ ಮನೆ ಮಾಡಿದೆ. ಹೊಸ ಬಾಳಿಗೆ ಅಡಿಯಿಡಲಿರುವ ನವ ಜೋಡಿಗಳಿಗೆ ಶುಭಾಶಯ ಹಾರೈಸೋಣ.

Facebook Comments