ಚಿತ್ರರಂಗದಲ್ಲಿ ವೃತ್ತಿ ವೈಷಮ್ಯದ ಕರಾಳ ದರ್ಶನ..!

ಈ ಸುದ್ದಿಯನ್ನು ಶೇರ್ ಮಾಡಿ

# ಬಿ.ಎಸ್.ರಾಮಚಂದ್ರ
ನಾವೆಲ್ಲಾ ಒಂದೇ … ನಾವು ಒಗ್ಗಟ್ಟಾಗಿ ದ್ದೇವೆ ಎಂದು ಘೋಷಣೆ ಮಾಡುವ ಸಿನಿಮಾ ಕಲಾವಿದರ ಆಂತರ್ಯದಲ್ಲಿ ವೃತ್ತಿ ವೈಷಮ್ಯ ಕುದಿಯುತ್ತಿರುತ್ತದೆಯೇ? ಇರಬಹುದು ಇದನ್ನು ಸಾರಾ ಸಗಟಾಗಿ ತಳ್ಳಿ ಹಾಕುವಂತಿಲ್ಲ.

ಈ ಮಾತು ಕನ್ನಡ ಚಿತ್ರರಂಗ, ಭಾರತೀಯ ಚಿತ್ರರಂಗ ಮಾತ್ರವಲ್ಲ ಇಡೀ ವಿಶ್ವ ಚಿತ್ರರಂಗಕ್ಕೆ ಅನ್ವಯಿಸುತ್ತದೆ. ಸುಶಾಂತ್ ಸಿಂಗ್ ಅವರ ಸಾವು ಈ ವಿಷಯವನ್ನು ಪದರು ಪದರಾಗಿ ತೆರೆದಿಡುತ್ತದೆ.

ವಾಸ್ತವವಾಗಿ ಸಿನಿಮಾ ಕಲಾವಿದರು ಸ್ನೇಹ ಜೀವಿಗಳು. ಪರಸ್ಪರರ ನಡುವೆ ವೈಯಕ್ತಿಕ ಹಂತದಲ್ಲಿ ಉತ್ತಮ ತಾಳ ಮೇಳ ಇರುತ್ತದೆ. ಆದರೆ ವೃತ್ತಿ ಜನಪ್ರಿಯತೆಯ ವಿಷಯವೇ ಬೇರೆ. ನಾನೇ ನಂಬರ್ 1 ಎಂದು ಯಾವ ಕಲಾವಿದರೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆ ರೀತಿ ಆಗಬೇಕು ಎಂಬ ಆಕಾಕೆಂ್ಷಯಂತೂ ಇರುತ್ತದೆ. ನಮ್ಮ ನೆಚ್ಚಿನ ನಾಯಕನೇ ನಂ.1 ಎಂದು ಆಯಾ ಕಲಾವಿದರ ಅಭಿಮಾನಿಗಳು ಮೇಲಾಟ ನಡೆಸುತ್ತಾರೆ.

ತಮ್ಮ ವೃತ್ತಿ ಬದುಕು ಉತ್ಕರ್ಷದಲ್ಲೇ ಇರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಅದು ಸಹಜ ಕೂಡ. ಆದರೆ ಏಕ ಕಾಲಕ್ಕೆ ಹಲವು ಜನರು ನಂ.1 ಆಗಲು ಸಾಧ್ಯವಿಲ್ಲ. ಬೇರೆ ಕಲಾವಿದನಿಗೆ ತನಗಿಂತ ಹೆಚ್ಚಿನ ಸಿನಿಮಾ ಸಿಕ್ಕಿದಾಗ ಅವನಿಗೆ ತನಗಿಂತ ಹೆಚ್ಚಿನ ಸಂಭಾವನೆ , ಜನಪ್ರಿಯತೆ ದೊರೆತಾಗ ಮತ್ತೊಬ್ಬನಿಗೆ ಒಳಗೊಳಗೇ ಅಸಮಾಧಾನ ಆಗುವುದು ಸಹಜ.

ಒಳ್ಳೆ ಗಳಿಕೆಯೊಂದಿಗೆ ನಡೆಯುತ್ತಿರುವ ಒಬ್ಬ ಕಲಾವಿದನ ಚಿತ್ರವನ್ನು ಚಿತ್ರಮಂದಿರದಿಂದ ತೆಗೆಸಿ ಹಾಕಲು ಬೇರೆ ಕಲಾವಿದರು ಕೈ ಜೋಡಿಸಿದ ಉದಾಹರಣೆಗಳಿವೆ.

ಬೇರೊಬ್ಬನಿಗೆ ಹೆಚ್ಚಿನ ಸಂಖ್ಯೆಯ ಸಿನಿಮಾಗಳು ಒಲಿದು ಬಂದಾಗ ಅದಕ್ಕೆ ಕಲ್ಲು ಹಾಕಿದ್ದೂ ಇದೆ. ಇದನ್ನು ಕೀಳು ಅಥವಾ ಕೊಳಕು ರಾಜಕೀಯ ಅನ್ನುವುದಕ್ಕಿಂತ ವೃತ್ತಿ ವೈಷಮ್ಯ ಅಂದರೆ ಸರಿ ಹೋದೀತು. ಕೆಲವು ಸಲ ಇದು ಅಹಿತಕಾರಿ ತಿರುವು ಪಡೆದುಕೊಳ್ಳುತ್ತದೆ.

ಸುಶಾಂತ್ ಸಿಂಗ್ ಸಾವು ಹಿಂದಿ ಚಿತ್ರರಂಗದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ. ಆಂತರಿಕ ಮಾತ್ಸರ್ಯದ ಕರಾಳತೆಯ ಮೇಲೆ ಬೆಳಕು ಚೆಲ್ಲಿದೆ. ಪಕ್ಷಪಾತ ಧೋರಣೆ, ಅಸೂಯೆಯೇ ಸುಶಾಂತ್‍ನ ಸಾವಿಗೆ ಮೂಲವಾಯಿತು ಎಂದು ಹೇಳುತ್ತಾರೆ. ಸುಶಾಂತ್ ಅವರ ಸಾವು ನಮಗೆಲ್ಲಾ ಎಚ್ಚರಿಕೆಯ ಗಂಟೆಯಂತಾಗಿದೆ. ಚಿತ್ರರಂಗದ ಕೆಲವರು ಸಮಾನಾಂತರ ಸಾಮ್ರಾಜ್ಯ ಸ್ಥಾಪಿಸಲು ಹವಣಿಸುತ್ತಿದ್ದಾರೆ.

ಈ ವರ್ತನೆಗೆ ಗುರಿಯಾದವರು ಖಿನ್ನತೆಗೆ ಜಾರುತ್ತಾರೆ. ತಮಗೆ ತೊಂದರೆ ಆಗುತ್ತಿದೆ ಎಂದು ಸುಶಾಂತ್ ಹಲವು ಸಲ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಸುಶಾಂತ್‍ಗೆ ಗಾಡ್ ಫಾದರ್ ಇರಲಿಲ್ಲ. ಅದೇ ದೊಡ್ಡ ಕೊರತೆ ಆಯಿತು.

ಅತೀವ ಒತ್ತಡದ ನಡುವೆಯೂ ಸುಶಾಂತ್ ಅವರು ಕಾಯ್ ಪೋಚೆ, ಕೇದಾರ್‍ನಾಥ್, ಧೋನಿ, ಚಿಚ್ಚೋರೆಯಂತಹ ಸಿನಿಮಾಗಳಲ್ಲಿ ಉತ್ತಮ ಅಭಿನಯ ನೀಡಿ ಜನಮನ ಗೆದ್ದರು. ಅದರ ಪರಿಣಾಮದಿಂದ ಕೆಲವರಿಗೆ ಅಸೂಯೆ ಆಯಿತು ಎಂದು ಜನಪ್ರಿಯ ಹಿಂದಿ ಚಿತ್ರ ನಟಿ ಕಂಗನಾ ರನಾವತ್ ಹೇಳಿದ್ದಾರೆ.

ಚಿಚ್ಚೋರೆ ಚಿತ್ರದ ನಂತರ ಸುಶಾಂತ್ ಅವರು ಏಳು ಸಿನಿಮಾಗಳಿಗೆ ಸೈನ್ ಮಾಡಿದರು. ಆದರೆ ಕೆಲವೇ ದಿನಗಳಲ್ಲಿ ಅಷ್ಟು ಸಿನಿಮಾಗಳು ಅವರ ಕೈ ತಪ್ಪಿ ಹೋದವು. ಪಕ್ಷಪಾತ ಧೋರಣೆ, ಅಸೂಯೆ, ಅಸಹನೆಯೇ ಇದಕ್ಕೆ ಕಾರಣ ಎಂದು ಬಾಲಿವುಡ್‍ನವರು ವಿಶ್ಲೇಷಿಸುತ್ತಿದ್ದಾರೆ.

ಇದನ್ನು ವಿರೋಧಿಸಿ ಸುಶಾಂತ್‍ರ ತವರು ರಾಜ್ಯವಾದ ಬಿಹಾರದಲ್ಲಿ ಪ್ರತಿಭಟನೆಗಳು ನಡೆದಿವೆ. ಇದರ ಹಿಂದೆ ಸಲ್ಮಾನ್ ಖಾನ್, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ, ಏಕ್ತಾ ಕಪೂರ್ ಅವರ ಕೈವಾಡವಿದೆ ಎಂದು ಆಪಾದಿಸಿ ಬಿಹಾರದ ಮುಜಫರ್ ನಗರದಲ್ಲಿ ಮೊಕದ್ದಮೆ ದಾಖಲಿಸಿದ್ದಾರಂತೆ.

ಇನ್ನೂ ವಿಚಿತ್ರವೆಂದರೆ ಸುಶಾಂತ್‍ರ ಸಾವನ್ನು ಚಿತ್ರರಂಗದ ಕೆಲವರು ಸಂಭ್ರಮಿಸಿದ್ದಾರೆ. ಜನಪ್ರಿಯ ಕಲಾವಿದರಾದ ಸೈಫ್ ಅಲಿಖಾನ್, ಅಲಿಯಾ ಭಟ್ ಮುಂತಾದವರು ಈ ಪ್ರವೃತ್ತಿ ಯನ್ನು ಖಂಡಿಸಿದ್ದಾರೆ. ಹಿಂದಿ ಚಿತ್ರರಂಗ ದಲ್ಲಿ ಪಕ್ಷಪಾತ ಧೋರಣೆ ಇರುವುದು ನಿಜ ಎಂದು ಹಲವರು ಒಪ್ಪಿಕೊಳ್ಳತೊಡಗಿದ್ದಾರೆ.

ಇಂತಹ ಅಹಿತಕರ ಘಟನೆಯು ಚಿತ್ರ ಕಲಾವಿದರ ಖ್ಯಾತಿಗೆ ಕುಂದು ತಂದಿದೆ. ಇಂತಹ ವರ್ತನೆಗಳು ಸಿನಿಮಾಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಜನರು ಸಿನಿಮಾದಿಂದ ವಿಮುಖರಾಗುತ್ತಾರೆ. ಹೀಗಾಗದಂತೆ ಎಚ್ಚರಿಕೆ ವಹಿಸಿಕೊಳ್ಳುವುದು ಚಿತ್ರರಂಗದವರ ಆದ್ಯ ಕರ್ತವ್ಯ.

Facebook Comments