ಬಿಗ್ ಬ್ರೇಕಿಂಗ್ : ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಏ.29-ಬಾಲಿವುಡ್ ಖ್ಯಾತನಟ ಇರ್ಫಾನ್‍ಖಾನ್ (54) ಇನ್ನಿಲ್ಲ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.  ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಅಸಂಖ್ಯಾತ ಅಭಿಮಾನಿಗಳನ್ನು ಖಾನ್ ಅಗಲಿದ್ದಾರೆ.

ಬಾಲಿವುಡ್, ಬ್ರಿಟಿಷ್ ಮತ್ತು ಅಮೆರಿಕನ್ ಸಿನಿಮಾಗಳಲ್ಲಿ ಅದ್ಭುತ ಅಭಿನಯದ ಮೂಲಕ ಜನಮನ ಗೆದ್ದಿದ್ದ ಇರ್ಫಾನ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.  ಕೆಂಡದುಂಡೆಯಂತಹ ಕಣ್ಣುಗಳು ಮತ್ತು ಎದುರಾಳಿಯನ್ನು ಬೆಚ್ಚಿಬೀಳಿಸುವಂತಹ ಒರಟು ಮತ್ತು ತೀಕ್ಷ್ಣ ನೋಟದಿಂದ ವಿಶೇಷವಾಗಿ ಗುರುತಿಸಿಕೊಂಡಿದ್ದ ಇರ್ಫಾನ್ ಎಲ್ಲ ಪಾತ್ರಗಳಿಗೂ ನ್ಯಾಯ ಒದಗಿಸಿದ್ದರು.

2018ರಲ್ಲಿ ನ್ಯೂರೋ ಎಂಡೊಕ್ರೊನಿಕ್ ಕ್ಯಾನ್ಸರ್‍ನಿಂದಾಗಿ ಇಂಗ್ಲೆಂಡ್‍ಗೆ ತೆರಳಿ ಸುದೀರ್ಘ ಚಿಕಿತ್ಸೆ ಪಡೆದು ನಂತರ ಭಾರತಕ್ಕೆ ಹಿಂದಿರುಗಿದರು. ತರುವಾಯ ಚಲನಚಿತ್ರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.ಲಾಕ್‍ಡಾನ್ ಘೋಷಣೆಯಾದ ಮಾ.25ಕ್ಕೆ ಮುನ್ನ ಅವರ ದೊಡ್ಡ ಕರುಳಿನಲ್ಲಿ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿ ಜೀವನ್ಮರಣದೊಂದಿಗೆ ಹೋರಾಡುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರು.

ಷಹಬಾದೆ ಇರ್ಫಾನ್ ಅಲಿಖಾನ್ ರಾಜಸ್ಥಾನದ ಜೈಪುರ್‍ನಲ್ಲಿ ಜ.7, 1966ರಲ್ಲಿ ಜನಿಸಿದರು. ಬಾಲ್ಯದಿಂದಲೂ ಪ್ರತಿಭಾವಂತರಾಗಿದ್ದ ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮದಲ್ಲಿ ಅಭಿನಯ ತರಬೇತಿ ಪಡೆದರು. 1985ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಖಾನ್ 30 ವರ್ಷಗಳ ಕಾಲ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದರು.

1988ರಲ್ಲಿ ತೆರೆ ಕಂಡ ಸಲಾಮ್ ಬಾಂಬೆ ಚಿತ್ರದಲ್ಲಿನ ಅದ್ಭುತ ಅಭಿನಯದಿಂದಾಗಿ ವಿಶೇಷ ಗಮನಸೆಳೆದರು. ಹಿಂದಿ, ಬ್ರಿಟಿಷ್ ಮತ್ತು ಅಮೆರಿಕ ಸಿನಿಮಾಗಳು ಸೇರಿದಂತೆ 60ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಕಿಲ್ಲರ್, ಲೈಫ್ ಆಫ್ ಪೈ, ಜ್ಯುರಾಸಿಕ್‍ಪಾರ್ಕ್, ಹಿಂದಿ ಮೀಡಿಯಂ, ಪೀಕು ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳಲ್ಲಿ ಇವರ ಅಭಿನಯ ಮನೋಜ್ಞ. ಅಂಗ್ರೇಜಿ ಮೀಡಿಯಂ ಇವರು ಅಭಿನಯಿಸಿದ ಕಟ್ಟಕಡೆಯ ಸಿನಿಮಾ.

Facebook Comments

Sri Raghav

Admin