ಗಣಿಗಾರಿಕೆಯಲ್ಲಿ ಸ್ಪೋಟಕ ವಸ್ತು ಬಳಸುವ ಬಗ್ಗೆ ಮಾರ್ಗಸೂಚಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.23- ಗಣಿಗಾರಿಕೆಯಲ್ಲಿ ಸ್ಪೋಟಕ ವಸ್ತು ಬಳಸುವ ಬಗ್ಗೆ ಸೋಮವಾರ ಗೃಹ ಇಲಾಖೆವತಿಯಿಂದ ಮಾರ್ಗಸೂಚಿ ನೀಡಲಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿಗಾರಿಕೆಗೆ ಲೈಸನ್ಸ್ ಪಡೆದವರು ಯಾವ ರೀತಿ ಸ್ಪೋಟಕ ಬಳಕೆ ಮಾಡಬೇಕು, ಯಾವ ಪ್ರಮಾಣ, ಎಷ್ಟು ಪಡೆಯಬೇಕು ಎಂಬುದರ ಬಗ್ಗೆ ಮಾರ್ಗ ಸೂಚಿ ನೀಡಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಸಂಭವಿಸಿದ ಸ್ಫೋಟಕದ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ ನಂತರ ಯಾವ ರೀತಿಯ ತನಿಖೆ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುವುದು. ಸ್ಫೊಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಕಲ್ಲು ಕ್ವಾರಿ ಲೀಸ್‍ಗೆ ಪಡೆದಿದ್ದ ಸುಧಾಕರ್ ಎಂಬುವವರನ್ನು ಬಂಧಿಸಲಾಗಿದೆ. ಸ್ಫೋಟಕ ವಸ್ತು ಎಲ್ಲಿಂದ ಬಂತು ಮತ್ತು ಹೇಗೆ ಸ್ಫೋಟ ಆಗಿದೆ ಎಂಬುದರ ಪ್ರಾಥಮಿಕ ವರದಿ ನಾಳೆ ಅಥವಾ ನಾಡಿದ್ದು ಬರಲಿದೆ.

ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಬಾಂಬ್ ಸ್ಕ್ವಾಡ್‍ನ ವರದಿ ಬಂದ ಬಳಿಕ ಸಿಎಂ ಜತೆ ಚರ್ಚಿಸಿ ಸಂಪೂರ್ಣ ತನಿಖೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಗಣಿಗಾರಿಕೆಗೆ ನಿರ್ಬಂಧವಿರುವ ಕಡೆಗಳಲ್ಲಿ ನಿಯಮ ಉಲ್ಲಂಘಿಸಿ ಗಣಿಗಾರಿಕೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಗಣಿ ಮಾಲೀಕ ಮತ್ತು ಗುತ್ತಿಗೆದಾರರು ಇಬ್ಬರೂ ಹೊಣೆಯಾಗುತ್ತಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇರುವ ಸಮಿತಿ ಲೈಸನ್ಸ್ ಕೊಡುತ್ತದೆ. ನಿಯಮ ಉಲ್ಲಂಘನೆಯಾದ ಕಡೆ ಕ್ರಮ ಜರುಗಿಸಲಾಗುತ್ತದೆ.

ಮುಖ್ಯಮಂತ್ರಿಯವರು ಲೀಸ್ ಅವಧಿ ಮುಗಿದವರು ಕಾಲಮಿತಿಯಲ್ಲಿ ನವೀಕರಿಸಿಕೊಂಡು ಗಣಿಗಾರಿಕೆ ಮುಂದುವರಿಸಬಹುದು ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮಾತನಾಡಿ, ನಿಖರವಾಗಿ ಗುರುತಿಸಿರುವ ಕಡೆಗಳಲ್ಲಿ ಗಣಿಗಾರಿಕೆ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ. ಕೆಲವು ಕಡೆ ಕಂಪ್ರೆಸರ್ ಬಳಸಿ ಗಣಿಗಾರಿಕೆ ಮಾಡಲಾಗುತ್ತಿದೆ. ಅದೂ ಕೂಡ ತಪ್ಪು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Facebook Comments