ಮಾನವ-ನೈಸರ್ಗಿಕ ಕಾನೂನು ಅಂತರ ಕಡಿಮೆಯಾದರೆ ಶಾಂತಿ ಸಾಧ್ಯ : ಗೃಹ ಸಚಿವ ಬಸವರಾಜ ಬೊಮ್ಮಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.4- ಪ್ರಸ್ತುತ ನಮ್ಮಲ್ಲಿ ಜಾರಿಯಲ್ಲಿರುವ ಕಾನೂನುಗಳು ಶಿಕ್ಷೆಯನ್ನು ಆಧಾರವಾಗಿಟ್ಟುಕೊಂಡಿದೆ. ಮಾನವ ನಿರ್ಮಿತ ಮತ್ತು ನೈಸರ್ಗಿಕ ಕಾನೂನುಗಳ ನಡುವಿನ ಅಂತರ ಕಡಿಮೆಯಾದರೆ ಸಮಾಜದಲ್ಲಿ ಶಾಂತಿ,  ನೆಮ್ಮದಿ ನೆಲೆಸಲು ಸಾಧ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಿವೃತ್ತ ಡಿಐಜಿಪಿ ಡಾ.ಡಿ.ಸಿ.ರಾಜಪ್ಪ ಅವರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ ಪೊಲೀಸ್ ಲಹರಿ ಮಾಸ ಪತ್ರಿಕೆಯನ್ನು ನಗರದ ಸಿನಿಯರ್ ಪೊಲೀಸ್ ಆಫೀಸರ್ಸ್‍ಮೆಸ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಪೊಲೀಸರು ಇಲ್ಲದ ಸಮಾಜವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಭೂತಾನ್ ಮತ್ತು ನೇಪಾಳದ ನಡುವಿನ ಸುಮಾರು 500 ಕಿ.ಮೀ. ಅಂತರದಲ್ಲಿ ಒಂದೂ ಪೊಲೀಸ್ ಠಾಣೆಯಾಗಲಿ, ಆಸ್ಪತ್ರೆಯಾಗಲಿ ಇಲ್ಲ. ಅಲ್ಲಿ ಅವಿದ್ಯಾವಂತ ಪ್ರಜ್ಞಾವಂತರಿದ್ದಾರೆ. ಸಣ್ಣ ತಪ್ಪುಗಳಿಗೂ ಪಶ್ಚಾತಾಪದ ಶಿಕ್ಷೆಯನ್ನು ಸ್ವಯಂ ವಿಧಿಸಿಕೊಳ್ಳುತ್ತಾರೆ ಎಂದರು.

ನಾವು ಮಾಡಿರುವ ಕಾನೂನಿನಲ್ಲಿ ಕಳ್ಳತನಕ್ಕೆ, ಹಿಂಸಾ ಪ್ರವೃತ್ತಿಗೆ , ಸುಳ್ಳು ಹೇಳುವುದಕ್ಕೆ ಎಲ್ಲದಕ್ಕು ಒಂದೊಂದು ಶಿಕ್ಷೆ ಇದೆ. ಸುಳ್ಳು ಹೇಳಬಾರದು ಎಂದು ಶಿಕ್ಷೆ ವಿಧಿಸುವುದು ಋಣಾತ್ಮಕ ಶಕ್ತಿಯಾಗಿದ್ದರೆ, ಸತ್ಯವನ್ನೇ ಹೇಳು ಅಹಿಂಸಾವಾದಿಯಾಗಿರು ಎಂಬುದು ಧನಾತ್ಮಕ ಶಕ್ತಿ. ಈ ಧನಾತ್ಮಕ ಶಕ್ತಿಯನ್ನು ನಿಸರ್ಗದತ್ತವಾದ ಆಧ್ಯಾತ್ಮಕ ಶಕ್ತಿ ಬೋಧಿಸುತ್ತದೆ.

ಮಾನವ ನಿರ್ಮಿತ ಮತ್ತು ನಿಸರ್ಗದತ್ತವಾದ ನಿಯಮಗಳ ನಡುವಿನ ಅಂತರ ಕಡಿಮೆಯಾದರೆ ಸಮಾಜದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣಗೊಳ್ಳುತ್ತದೆ. ಜಗತ್ತು ಇಂದು ಸಮರ್ಥ ನಾಯಕತ್ವ ಮತ್ತು ಮಾನವೀಯತೆ ಕೊರೆಯಿಂದ ಬಳಲುತ್ತಿದೆ ಎಂದು ಅವರು ಹೇಳಿದರು. ಪೆÇಲೀಸ್ ಲಹರಿ ಪುಸ್ತಕ ಪೆÇಲೀಸ್ ಇಲಾಖೆಯ ಕುರಿತಂತೆ ಸಮಾಜದಲ್ಲಿರುವ ಭಾವನೆಯನ್ನು ಬದಲಾವಣೆ ಮಾಡಲಿ ಎಂದು ಸಲಹೆ ನೀಡಿದರು.

ಚಲನಚಿತ್ರಗಳಲ್ಲಿ ಪೊಲೀಸರ ಪಾತ್ರಗಳನ್ನು ಪ್ರಮುಖವಾಗಿ ತೋರಿಸಲಾಗುತ್ತದೆ. ಪೊಲೀಸರಿಗೆ ತಮ್ಮಗಾಗಿರುವ ಅನುಭವಗಳನ್ನು ಬರೆದರೆ ಅದೇ ದೊಡ್ಡ ಸಾಹಿತ್ಯವಾಗುತ್ತದೆ. ಪೊಲೀಸರದು ಅತ್ಯಂತ ಕಠಿಣವಾದ ಕೆಲಸ. ತಮ್ಮ ಪ್ರಾಣವನ್ನು ಲೆಕ್ಕಿಸದೆ ಕಾರ್ಯಾಚರಣೆ ಮಾಡುತ್ತಾರೆ. ಪೊಲೀಸರು ಇಲ್ಲದೇ ಇರುವ ಸಮಾಜವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.

ಸದಾಕಾಲ ಕಷ್ಟದಲ್ಲೇ ಕೆಲಸ ಮಾಡುವ ಪೊಲೀಸರಿಗೆ ಕೆಲವು ಅಧಿಕಾರಗಳು ಕೂಡ ಪ್ರಾಪ್ತಿಯಾಗಿರುತ್ತವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಲಿ ಎಂದು ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದರು. ನಟ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಬಹಳಷ್ಟು ಮಂದಿ ಸೃಜನಶೀಲ ಸಾಹಿತಿಗಳಿದ್ದಾರೆ. ಅವರ ಅನುಭವಗಳು ಸಮಾಜಕ್ಕೆ ಲಭ್ಯವಾಗಲಿ. ಪೊಲೀಸರ ಕುಟುಂಬದ ಸದಸ್ಯರ ಅನುಭವವೂ ದಾಖಲಾಗುವ ಮೂಲಕ ಈ ಪತ್ರಿಕೆ ಪರಿಪೂರ್ಣವಾಗಲಿ ಎಂದು ಹಾರೈಸಿದರು.

ಜಾಗತಿಕ ಮಾನದಂಡದ ಪ್ರಕಾರ ಒಂದು ಲಕ್ಷ ಜನರಿಗೆ 222 ಮಂದಿ ಪೊಲೀಸರು ಇರಬೇಕು. ಆದರೆ, 136 ಮಂದಿ ಮಾತ್ರ ಇದ್ದಾರೆ. ಇವರ ಸಂಖ್ಯೆ ಹೆಚ್ಚಾಗಲಿ ಎಂದು ಸಲಹೆ ನೀಡಿದರು.

ಸಮಾಜದಲ್ಲಿ ರಾಜಕಾರಣಿಗಳು, ವಕೀಲರು, ಪೊಲೀಸರು ಮತ್ತು ಸಿನಿಮಾದವರ ಬಗ್ಗೆ ಕೆಲ ಅನುಮಾನಗಳಿವೆ. ಆಯಾ ಕ್ಷೇತ್ರದಲ್ಲಿರುವ ಜನರು ಈ ಅನುಮಾನಗಳನ್ನು ಬಗೆಹರಿಸಬೇಕೆಂದು ನಾಗತಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದರು.ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಅವರು ಮಾಸ ಪತ್ರಿಕೆಗೆ ಶುಭ ಹಾರೈಸಿದರು.

Facebook Comments