ಸಂಪತ್‍ರಾಜ್ ಬಂಧನ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.17- ಕೆಜಿಹಳ್ಳಿ ಹಾಗೂ ಡಿಜೆಹಳ್ಳಿ ಕೋಮುಗಲಭೆ ಪ್ರಕರಣದ ಪ್ರಮುಖ ರೂವಾರಿ ಎನ್ನಲಾಗಿರುವ ಬಿಬಿಎಂಪಿ ಮಾಜಿ ಮೇಯರ್ ಸಂಪತ್‍ರಾಜ್ ಬಂಧನದಿಂದ ಈ ಪ್ರಕರಣಕ್ಕೆ ಮಹತ್ವದ ತಿರುವು ಸಿಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಸಿಸಿಬಿ ಪೊಲೀಸರು ರಹಸ್ಯ ಸ್ಥಳದಲ್ಲಿ ಅಡಗಿದ್ದ ಸಂಪತ್‍ರಾಜ್ ಅವರನ್ನು ಬಂಧಿಸಿದ್ದಾರೆ. ಈಗ ಪ್ರಕರಣಕ್ಕೆ ಹೊಸ ತಿರುವು ಬರಲಿದೆ ಎಂದರು. ಬೆಂಗಳೂರಿನಲ್ಲಿ ಅಡಗಿದ್ದರ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ತನಿಖಾ ತಂಡ ಅವರನ್ನು ತಡರಾತ್ರಿ ಬಂಧಿಸಿ ವಶಕ್ಕೆ ಪಡೆದಿದೆ.

ವಿಚಾರಣೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು. ಪ್ರಕರಣದಲ್ಲಿ ಸಂಪತ್ ರಾಜ್ ಪಾತ್ರ ಕುರಿತು ಈಗಾಗಲೇ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಯಾವ ಕಾರಣಕ್ಕಾಗಿ ಈ ಕೃತ್ಯ ನಡೆಸಿದ್ದರು. ಇದರ ಹಿಂದಿನ ಉದ್ದೇಶವೇನು ಎಲ್ಲವೂ ಸದ್ಯದಲ್ಲೇ ಬಹಿರಂಗವಾಗಲಿದೆ ಎಂದು ತಿಳಿಸಿದ್ದಾರೆ.

ಸಿಸಿಬಿ ಪೊಲೀಸರು ಅತ್ಯಂತ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದಾರೆ. ಅವರಿಗೆ ಯಾರಿಂದಲೂ, ಯಾವುದೇ ರೀತಿಯ ಒತ್ತಡವಿಲ್ಲ. ಗಲಭೆಯ ಹಿಂದಿನ ಉದ್ದೇಶ ಜನತೆಗೆ ತಿಳಿಯಬೇಕು. ಸಂಪತ್‍ರಾಜ್ ಇರಲಿ ಅಥವಾ ಇನ್ಯಾರೇ ಇರಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಕ್ಕೆ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಇದಕ್ಕೂ ಮುನ್ನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನೆಗೆ ಭೇಟಿ ನೀಡಿ ಸಂಪತ್‍ರಾಜ್ ಬಂಧನ ಕುರಿತಂತೆ ಸಮಗ್ರ ಮಾಹಿತಿ ನೀಡಿದರು. ಸಂಪತ್‍ರಾಜ್ ಆಪ್ತ ರಿಯಾಜ್‍ವುದ್ದೀನ್ ನೀಡಿದ ಸುಳಿವಿನ ಮೇರೆಗೆ ನಗರದ ರಹಸ್ಯ ಸ್ಥಳದಲ್ಲಿ ಅಡಗಿದ್ದ ಅವರನ್ನು ನಿನ್ನೆ ರಾತ್ರಿ ಸಿಸಿಬಿಯ ತನಿಖಾ ತಂಡ ಬಂಧಿಸಿದೆ. ಹೆಚ್ಚಿನ ಮಾಹಿತಿಗಾಗಿ ತೀವ್ರ ವಿಚಾರಣೆಗೆ ಒಳಪಡಿಸಿದ್ದೇವೆ ಎಂಬ ಮಾಹಿತಿಯನ್ನು ಕಮಲ್‍ಪಂತ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದರು. ಸಂಪತ್‍ರಾಜ್ ಬಂಧನ ಹಾಗೂ ಇತರ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Facebook Comments