ಸಂಪುಟ ರಚನೆಗೆ ವರಿಷ್ಠರಿಂದ ಇಂದೇ ಗ್ರೀನ್ ಸಿಗ್ನಲ್, ಆಕಾಂಕ್ಷಿಗಳಲ್ಲಿ ಡವಡವ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.3-ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿರುವ ಸಚಿವ ಸಂಪುಟ ರಚನೆಗೆ ಇಂದು ದೆಹಲಿ ಬಿಜೆಪಿ ವರಿಷ್ಠರು ಅಂತಿಮ ಮುದ್ರೆ ಹಾಕುವ ಸಾಧ್ಯತೆಯಿದ್ದು, ಆಕಾಂಕ್ಷಿಗಳಲ್ಲಿ ಡವಡವ ಶುರುವಾಗಿದೆ.  ಉಳಿದಿರುವ ಅವಧಿಯಲ್ಲಿ ಸಂಪುಟ ಸೇರಲೇಬೇಕೆಂದು ಸುಮಾರು 40ಕ್ಕೂ ಅಧಿಕ ಶಾಸಕರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತಮ್ಮ ಗಾಡ್‍ಫಾದರ್‍ಗಳ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ. ಕೊನೆಕ್ಷಣದವರೆಗೂ ಸಚಿವ ಸ್ಥಾನ ಯಾರಿಗೆ ಸಿಗುತ್ತದೆ ಎಂಬುದು ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿದೆ.

ಗರಿಗರಿ ಬಟ್ಟೆ ಹೊಲಿಸಿಕೊಂಡು ಗೂಟದ ಕಾರು ಏರಲು ತುದಿಗಾಲಲ್ಲಿ ನಿಂತಿರುವ ಆಕಾಂಕ್ಷಿಗಳ ಎದೆಬಡಿತ ಜೋರಾಗುತ್ತಿದ್ದು, ಯಾರಿಗೆ ಅದೃಷ್ಟ ಒಲಿದು, ಇನ್ಯಾರಿಗೆ ಕೈ ಕೊಡಲಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಈ ಕ್ಷಣದವರೆಗೂ ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿ ಅಂತಿಮಗೊಂಡಿಲ್ಲ. ಮೂಲಗಳ ಪ್ರಕಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 40 ಶಾಸಕರ ಪಟ್ಟಿಯನ್ನು ನೀಡಿದ್ದು, ವರಿಷ್ಠರೇ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವಂತೆ ಮನವಿ ಮಾಡಿದ್ದಾರೆ.

ಸಂಸತ್ ಭವನದಲ್ಲಿ ಇಂದು ಬಸವರಾಜ್ ಬೊಮ್ಮಾಯಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ನಂತರ ಸಚಿವರ ಪಟ್ಟಿಗೆ ಅನುಮತಿ ಪಡೆಯಲು ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ ಜೊತೆ ಚರ್ಚೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಹಾಕುವುದರಿಂದ ಸಂಜೆಯೊಳಗೆ ಬಹುತೇಕ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಎಲ್ಲವೂ ನಿರೀಕ್ಷೆಯಂತೆ ನಡೆದರೆ ನಾಳೆ ಅಥವಾ ಗುರುವಾರ ಯಾವುದೇ ಕ್ಷಣದಲ್ಲೂ ಸಂಪುಟ ರಚನೆಯಾಗುವ ಸಂಭವವಿದ್ದು, ಮೊದಲ ಹಂತದಲ್ಲಿ 20ರಿಂದ 25 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂಭವವಿದೆ. ಒಂದೇ ಹಂತದಲ್ಲಿ ಪೂರ್ಣ ಪ್ರಮಾಣದ ಸಂಪುಟ ರಚನೆಯಾದರೆ ದೊಡ್ಡ ಮಟ್ಟದಲ್ಲಿ ಅಸಮಾಧಾನ ಭುಗಿಲೇಳಬಹುದೆಂಬ ಕಾರಣಕ್ಕಾಗಿ ಪರಿಸ್ಥಿತಿಗೆ ಅನುಗುಣವಾಗಿ ವರಿಷ್ಠರು ಎರಡು ಹಂತದ ಸಂಪುಟ ರಚನೆ ಮಾಡುವಂತೆ ಸಲಹೆ ಮಾಡಿದ್ದಾರೆ.

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ನಿವಾಸದಲ್ಲೇ ತಂಗಿದ್ದ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಭವನಕ್ಕೂ ಬಾರದೆ ನೇರವಾಗಿ ಸಂಸತ್ ಭವನಕ್ಕೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈಗಿನ ಮಾಹಿತಿ ಪ್ರಕಾರ ಮಾಜಿ ಸಿಎಂ ಯಡಿಯೂರಪ್ಪ ಸಂಪುಟದಲ್ಲಿದ್ದ 5ಕ್ಕೂ ಹೆಚ್ಚು ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಜೆಡಿಎಸ್‍ನಿಂದ ಬಂದಿದ್ದ ನಾಲ್ವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಿನ್ನೆ ರಾತ್ರಿ ನವದೆಹಲಿಯ ಮೋತಿಲಾಲ್ ನೆಹರು ರಸ್ತೆಯಲ್ಲಿರುವ ನಡ್ಡಾ ನಿವಾಸದಲ್ಲಿ ಪಟ್ಟಿಗೆ ಅಂತಿಮ ಸ್ಪರ್ಶ ನೀಡಲು ಸಾಧ್ಯವಾಗಲಿಲ್ಲ. ಏಕೆಂದರೆ ಯಡಿಯೂರಪ್ಪ ನೀಡಿರುವ ಪಟ್ಟಿ, ಬಿಜೆಪಿ ಮತ್ತು ಸಂಘಪರಿವಾರ ನೀಡಿರುವ ಪಟ್ಟಿ , ವರಿಷ್ಠರ ಪಟ್ಟಿ ಹಾಗೂ ಬೊಮ್ಮಾಯಿ ಅವರ ಪಟ್ಟಿ ಹೀಗೆ ನಾಲ್ಕು ಪಟ್ಟಿ ಇರುವುದರಿಂದ ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ಹೊರಗಿಡಬೇಕು ಎಂಬುದೇ ಕಬ್ಬಿಣದ ಕಡಲೆಯಾಗಿದೆ.

ಬೆಂಗಳೂರಿನಿಂದ ಆರ್.ಅಶೋಕ್, ಅಶ್ವತ್ಥ ನಾರಾಯಣ, ಅರವಿಂದ ಲಿಂಬಾವಳಿ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಸತೀಶ್ ರೆಡ್ಡಿ, ಚಿಕ್ಕಬಳ್ಳಾಪುರದಿಂದ ಡಾ.ಕೆ.ಸುಧಾಕರ್, ತುಮಕೂರಿನಿಂದ ಜೆ.ಸಿ.ಮಾಧುಸ್ವಾಮಿ, ಮಂಡ್ಯದಿಂದ ಕೆ.ನಾರಾಯಣಗೌಡ, ಚಿತ್ರದುರ್ಗದಿಂದ ಶ್ರೀರಾಮುಲು, ಪೂರ್ಣಿಮಾ ಶ್ರೀನಿವಾಸ್, ಬೆಳಗಾವಿಯಿಂದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಉಡುಪಿಯಿಂದ ಸುನೀಲ್‍ಕುಮಾರ್, ದಕ್ಷಿಣ ಕನ್ನಡದಿಂದ ಎಸ್.ಅಂಗಾರ, ಶಿವಮೊಗ್ಗದಿಂದ ಅರಗ ಜ್ಞಾನೇಂದ್ರ, ಕೆ.ಎಸ್.ಈಶ್ವರಪ್ಪ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ದಾವಣಗೆರೆಯಿಂದ ಎಂ.ಪಿ.ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಹಾವೇರಿಯಿಂದ ಬಿ.ಸಿ.ಪಾಟೀಲ್, ಧಾರವಾಡದಿಂದ ಅರವಿಂದ್ ಬೆಲ್ಲದ್ ಹಾಗೂ ಶಂಕರ್ ಪಾಟೀಲ್ ಮುನೇನಕೊಪ್ಪ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಕಲಬುರಗಿಯಲ್ಲಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಾಗಲಕೋಟೆಯಿಂದ ಮುರುಗೇಶ್ ನಿರಾಣಿ, ವೀರಣ್ಣ ಚರಂತಿ ಮಠ, ಕೊಪ್ಪಳದಿಂದ ಹಾಲಪ್ಪ ಆಚಾರ್, ಪರಣ್ಣ ಮನವಳ್ಳಿ, ಬಳ್ಳಾರಿಯಿಂದ ಸೋಮಶೇಖರ ರೆಡ್ಡಿ, ಹಾಸನದಲ್ಲಿ ಪ್ರೀತಮ್ ಗೌಡ, ಯಾದಗಿರಿಯಲ್ಲಿ ರಾಜುಗೌಡ ನಾಯಕ್, ರಾಯಚೂರಿನಿಂದ ಶಿವನಗೌಡ ನಾಯಕ್, ಮೈಸೂರಿನಿಂದ ಎಸ್.ಎ.ರಾಮದಾಸ್ ಹೀಗೆ ಸರಿಸುಮಾರು 4 ಡಜನ್ ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಎಲ್ಲವೂ ನಿರೀಕ್ಷೆಯಂತೆ ಆದರೆ ಸಂಜೆ ಪಟ್ಟಿ ಹೊರಬೀಳಲಿದ್ದು, ನಾಳೆ ಇಲ್ಲವೇ ಗುರುವಾರ ಸಂಪುಟ ರಚನೆಯಾಗಲಿದೆ.

Facebook Comments