ಬಲ ಪ್ರಯೋಗ – ಲಾಠಿ ಚಾರ್ಜ್ ಬೇಡ, ವಾಹನ ಸೀಜ್ ಮಾಡಿ: ಪೊಲೀಸರಿಗೆ ಗೃಹ ಸಚಿವರ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ11-ಸರ್ಕಾರ ಜಾರಿಗೊಳಿಸಿರುವ ಸೆಮಿ ಲಾಕ್ ಡೌನ್ ಉಲ್ಲಂಘಿಸಿದವರ ಮೇಲೆ ಬಲ ಪ್ರಯೋಗ, ಲಾಠಿ ಚಾರ್ಜ್ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಲ ಪ್ರಯೋಗದ ಬದಲಾಗಿ ಕಾನೂನು ರೀತಿ ಕ್ರಮ ಜರುಗಿಸಲು ನಿರ್ದೇಶನ ನೀಡಲಾಗಿದೆ. ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿ ಅನಾವಶ್ಯಕವಾಗಿ ಓಡಾಡುವ ವಾಹನಗಳನ್ನು ಸೀಜ್ ಮಾಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಈಗಾಗಲೇ ಲಾಠಿ ಬೀಸುವುದು ನಿಂತು ಹೋಗಿದೆ. ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ‌. ಸಂಚರಿಸುವ ವಾಹನಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು. ಕೇವಲ ಮಾರುಕಟ್ಟೆ ಪ್ರದೇಶಗಳಲ್ಲಿ ಜನ ಸಂದಣಿ ಸಮಸ್ಯೆ ಕಂಡು ಬರುತ್ತಿದೆ. ಅಂತಹ ಕಡೆಗಳಲ್ಲಿ ಜನ ಸಂದಣಿ ಹೆಚ್ಚಾಗದಂತೆ ಕ್ರಮ ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.

ಆದಷ್ಟು ಹೆಚ್ಚು ಜನರು ಒಟ್ಟಿಗೆ ಸೇರದಂತೆ ನಿಗಾ ವಹಿಸಬೇಕು. ಬೇರೆ ಬೇರೆ ರೀತಿಯ ಪರ್ಯಾಯ ವ್ಯವಸ್ಥೆ ಮಾಡಲು ನಿರ್ದೇಶನ ನೀಡಿರುವುದಾಗಿ ತಿಳಿಸಿದರು. ಕೋವಿಡ್ ನಿಯಂತ್ರಿಸಲು ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಮಾರ್ಗಸೂಚಿ ಅನುಷ್ಠಾನಕ್ಕೆ ಪೊಲೀಸರು ಸಹಕಾರ ಕೊಡುತ್ತಾರೆ. ಜನರು ವಾಸ್ತವ ಸ್ಥಿತಿ ಅರ್ಥ ಮಾಡಿಕೊಂಡು ಹದಿನಾಲ್ಕು ದಿನ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಸೆಮಿ ಲಾಕ್ ಡೌನ್ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಗೃಹ ಸಚಿವರು ಮನವಿ ಮಾಡಿದರು.

Facebook Comments