ರೇಖಾ ಕೊಲೆ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರಿಗೆ ಬೊಮ್ಮಾಯಿ ಪ್ರಶಂಸೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.26- ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೀಶ್ ಕೊಲೆ ಪ್ರಕರಣದ ಆರೋಪಿಗಳನ್ನು ಘಟನೆ ನಡೆದ 24 ಗಂಟೆಗಳಲ್ಲೇ ಬಂಧಿಸುವ ಮೂಲಕ ಪೊಲೀಸರು ದಕ್ಷತೆ ಮತ್ತು ಪ್ರಾಮಾಣಿಕತೆ ಮೆರೆದಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರಶಂಸಿಸಿದರು.

ಅಂತಾರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಪ್ರಕರಣ ನಡೆದ ನಂತರ ಆರೋಪಿಗಳ ಬಂಧನಕ್ಕೆ ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿ ಇಲಾಖೆಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಘಟನೆ ನಡೆದ ನಂತರ ಬೆಂಗಳೂರಿನ ಜನತೆ ಸಹಜವಾಗಿ ಆತಂಕಗೊಂಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳು ಎಲ್ಲೆ ಇದ್ದರೂ ಎಷ್ಟೇ ಪ್ರಭಾವಿಗಳಾಗಿದ್ದರೂ ಬಂಧಿಸಬೇಕೆಂದು ಸೂಚನೆ ನೀಡಲಾಗಿತ್ತು. ಅದರಂತೆ ಯಶಸ್ವಿಯಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಈವರೆಗೂ ಒಟ್ಟು 5 ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಅದರಲ್ಲಿ ಇಬ್ಬರು ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಲು ಯತ್ನಿಸಿದಾಗ ಅವರ ಕಾಲಿಗೆ ಅನಿವಾರ್ಯವಾಗಿ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ. ಉಳಿದ ಮೂವರು ಆರೋಪಿಗಳನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ ಎಂದರು.

ಮಾದಕ ವಸ್ತು ವಿಶೇಷವಾಗಿ ಯುವಜನತೆ ಭವಿಷ್ಯವನ್ನೇ ಹಾಳುಮಾಡುತ್ತದೆ. ಇದು ಅಂತಾರಾಷ್ಟ್ರೀಯ ಪಿಡುಗಾಗಿದ್ದು, ಇದನ್ನು ಬುಡಸಮೇತ ಕಿತ್ತು ಹಾಕಲು ಪ್ರತಿಯೊಬ್ಬರು ಪಣ ತೊಡಬೇಕು. ಸರ್ಕಾರ ಮತ್ತು ಕಾನೂನಿಂದಲೇ ಸಾಧ್ಯವಿಲ್ಲ. ಸಾರ್ವಜನಿಕರು ಸಹ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಬೆಂಗಳೂರು ನಗರ ಸೇರಿದಂತೆ 5 ಜಿಲ್ಲೆಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು 50 ಕೋಟಿಗೂ ಹೆಚ್ಚು ಬೆಲೆ ಬಾಳುವ ಶೇ.60ರಷ್ಟು ಮಾದಕ ವಸ್ತುಗಳನ್ನು ನ್ಯಾಯಾಲಯದ ಆದೇಶದಂತೆ ನಾಶಪಡಿಸಲಾಗಿದೆ. ಉಳಿದಿರುವ ಶೇ.40ರಷ್ಟು ಮಾದಕ ವಸ್ತುಗಳನ್ನು ಎಫ್‍ಎಸ್‍ಎಲ್ ವರದಿ ಬಂದ ನಂತರ ನಾಶಪಡಿಸಲಾಗುವುದು ಎಂದು ವಿವರಿಸಿದರು.
ಕೊರೊನಾ ಸಂದರ್ಭದಲ್ಲೂ ಪೊಲೀಸರು ಮಾದಕ ವಸ್ತುಗಳ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಕೆಲವು ಸಮಾಜಘಾತುಕ ಶಕ್ತಿಗಳು ಇಂಥ ಸಂದರ್ಭದಲ್ಲೂ ಬೇರೆ ಬೇರೆ ರಾಷ್ಟ್ರಗಳಿಗೆ ಸಾಗಾಣಿಕೆ ಮಾಡಲು ಪ್ರಯತ್ನಿಸಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿತ್ತು ಎಂದು ಬೊಮ್ಮಾಯಿ ತಿಳಿಸಿದರು.

ಇತ್ತೀಚೆಗೆ ರಾಜ್ಯದಲ್ಲಿ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಹೆಚ್ಚಾಗುತ್ತಿದೆ. ಇದರಲ್ಲಿ ಭಾಗಿಯಾಗುವ ಆರೋಪಿಗಳು ನ್ಯಾಯಾಲಯದಿಂದ ಬಹುಬೇಗನೆ ಜಾಮೀನು ಪಡೆದು ಆಚೆ ಬರುತ್ತಾರೆ. ಪುನಃ ಮತ್ತೆ ಇಂಥದೇ ಕೃತ್ಯಗಳನ್ನು ನಡೆಸುತ್ತಾರೆ ಎಂದು ವಿಷಾದಿಸಿದರು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈಗಿರುವ ಕಾಯ್ದೆಯಲ್ಲಿನ ಕೆಲವು ನಿಯಮಗಳಿಗೆ ತಿದ್ದುಪಡಿ ಮಾಡಲು ತೀರ್ಮಾನಿಸಿದ್ದೇವೆ. ಇದು ರಾಷ್ಟ್ರೀಯ ಕಾಯ್ದೆಯಾಗಿರುವುದರಿಂದ ನಾವು ತಿದ್ದುಪಡಿ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಯ್ದೆಗೆ ಎಲ್ಲಿಯೂ ಧಕ್ಕೆಯಾಗದಂತೆ ಅದರಲ್ಲಿರುವ ಕೆಲವು ನಿಯಮಗಳನ್ನು ತಿದ್ದುಪಡಿ ಮಾಡುವ ಸಂಬಂಧ ರಾಷ್ಟ್ರೀಯ ಕಾನೂನು ಶಾಲೆಗೆ ಜವಾಬ್ದಾರಿ ನೀಡಿದ್ದೇವೆ. ಅವರು ವರದಿ ನೀಡಿದ ನಂತರ ತಕ್ಷಣವೇ ಈ ಕಾಯ್ದೆಗೆ ಹೊಸ ನಿಯಮಗಳನ್ನು ಸೇರ್ಪಡೆ ಮಾಡಲಾಗುವುದೆಂದು ತಿಳಿಸಿದರು. ಮಾದಕ ವಸ್ತುಗಳಲ್ಲಿ ಭಾಗಿಯಾಗುವವರಿಗೆ ತಕ್ಷಣವೇ ಜಾಮೀನು ಸಿಗದಂತೆ ಮಾಡುವುದು ಹಾಗೂ ಕಠಿಣ ಕಾನೂನು ಕ್ರಮ ಜರುಗಿಸುವುದು ಸೇರಿದಂತೆ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯ ಪೆÇಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್, ಗೃಹ ಇಲಾಖೆ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments