ಬೂತ್ ಮಟ್ಟದ ಮತದಾನ ವಿವರ ಬಹಿರಂಗದಿಂದ ದ್ವೇಷ ರಾಜಕೀಯ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ,ಮೇ 27- ರಾಜಕೀಯ-ರಾಜಕಾರಣ ಏನೆ ಇರಲಿ ಕೊನೆಗೆ ಮಾಡದ ತಪ್ಪಿಗೆ ತೊಂದರೆ ಅನುಭವಿಸುವುದು ಮಾತ್ರ ಜನಸಾಮಾನ್ಯರು.  ಚುನಾವಣೆ ಮುಗಿದಿದೆ. ಸ್ಪರ್ಧೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗೆ ಸಂಭ್ರಮ; ಆದರೆ ಮತದಾರರಿಗೆ ಪರೀಕ್ಷೆ ಶುರು … ಕಾರಣ ಬೂತ್ ಮಟ್ಟದ ಮತದಾನ ವಿವರ ಬಹಿರಂಗಗೊಳಿಸುವುದೇ ಇಂತಹ ಸಮಸ್ಯೆಗೆ ಕಾರಣ.

ಸೋರಿಕೆ ಎನ್ನುವುದಕ್ಕಿಂತ ಇದರ ವಿವರ ಬಹಿರಂಗ ಮಾಡುವುದೆ ಸಮಾಜದಲ್ಲಿ ಜನನಾಯಕರು ಹಾಗೂ ಮತದಾರರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತಿದೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಹೌದು..ಇಂದು ಚುನಾವಣೆ ಪಾರದರ್ಶಕವಾಗಿ ನಡೆಸುವ ನೆಪದಲ್ಲಿ ಚುನಾವಣಾ ಆಯೋಗ ಕ್ಷೇತ್ರವಾರು ಮತದಾನವಾದ ಬೂತ್ ಮಟ್ಟದ ವಿವರವನ್ನು ಪ್ರಕಟಿಸುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ವಾದವು ಕೇಳಿಬರುತ್ತಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭು ಗಳು ಅವರಿಂದಲೇ ರಾಜಕೀಯ ರಾಜಕಾರಣ ಜೀವಂತ ಆದರೆ ಚುನಾವಣೆ ಪಾರದರ್ಶಕವಾಗಿ ನಡೆಸುವ ನೆಪದಲ್ಲಿ ಅಥವಾ ಇನ್ನಾವುದೋ ಒತ್ತಡಕ್ಕೆ ಒಳಗಾಗಿ ಮತದಾನವಾದ ವಿವರವನ್ನು ಬಹಿರಂಗ ಮಾಡುವ ಮೂಲಕ ಜನನಾಯಕರ ಹಾಗೂ ಮತದಾರರ ನಡುವೆ ಕಂದಕ ನಿರ್ಮಾಣ ವಾಗುವಂತೆ ಮಾಡುತ್ತಿದೆ.

ಅಲ್ಲದೆ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡುವ ಜೊತೆಗೆ ಗ್ರಾಮದಲ್ಲಿ ಅಶಾಂತಿ ನೆಲೆಸಲು ಈ ವಿವರಗಳು ಕಂಟಕವಾಗಿದೆ ಎಂಬುದು ಹಲವರ ವಾದ.

ಇದರಿಂದ ಯಾವ ಮತದಾರ ಮತದಾನ ಮಾಡಿಲ್ಲ ಎಂಬುದನ್ನು ಹಾಗೂ ಆ ಕ್ಷೇತ್ರದ ಅಥವಾ ಬೂತ್‍ನ ಅಭ್ಯರ್ಥಿಗೆ ಎಷ್ಟು ಮತ ಚಲಾವಣೆಯಾಗಿದೆ ಎಂಬ ಮಾಹಿತಿ ನೀಡುತ್ತದೆ. ಆದರೆ ಇದೇ ಮಾಹಿತಿಯನ್ನು ಒಟ್ಟಾಗಿ ನೀಡುವ ಬದಲು ಯಾವ ಅಭ್ಯರ್ಥಿಗೆ ಎಷ್ಟು ಮತ; ಮಹಿಳೆಯರು -ಪುರಿಷರು ಎಷ್ಟು ; ಆ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪ್ರತಿ ಅಭ್ಯರ್ಥಿಗೆ ಚಲಾಯಿಸಿರುವ ಮತದಾನ ವಿವರ ನಿಡಲಾಗುತ್ತಿದೆ.

ಇದರಿಂದ ಯಾವ ಮತದಾರ ಯಾವ ಅಭ್ಯರ್ಥಿಗೆ ಮತ ನೀಡಿದ್ದಾನೆ ಯಾವ ವಾರ್ಡ್, ಗ್ರಾಮದ ಮತದಾರರು ಯಾವ ಪಕ್ಷಕ್ಕೆ ಅಥವಾ ಅಭ್ಯರ್ಥಿಗೆ ಮತ ನೀಡಿದ್ದಾರೆ ಎಂಬ ಮಾಹಿತಿ ಗೊತ್ತಾಗುತ್ತದೆ ಈ ಮೂಲಕ ಆ ಕ್ಷೇತ್ರದಲ್ಲಿ ಹಿಂದೆ ಆಯ್ಕೆ ಯಾದ ಅಭ್ಯರ್ಥಿ ಗೆದ್ದರೆ ಸರಿ ಇಲ್ಲವಾದಲ್ಲಿ ಆ ಗ್ರಾಮದ ಅಥವಾ ವಾರ್ಡ್ ಅಭಿವೃದ್ಧಿಗೆ ಗ್ರಹಣ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.

ಈ ಬಗ್ಗೆ ಹಲವು ಮಂದಿ ದೂರಿದ್ದಾರೆ ಪಟ್ಟಣ ,ಪುರಸಭೆ ಚುನಾವಣೆಯಾದರೆ ವಾರ್ಡ್ , ವಿಧಾನಸಭಾ -ಲೋಕಸಭೆ ಚುನಾವಣೆಯಾದರೆ ಬೂತ್ ಅಥವಾ ಗ್ರಾಮದ ಅಭಿವೃದ್ಧಿಗೆ ಬ್ರೇಕ್ ಬೀಳುತ್ತದೆ. ಈ ರೀತಿ ಮತದಾನ ನಡೆದು ನಮ್ಮ ಪಕ್ಷಕ್ಕೆ ಅಥವಾ ಅಭ್ಯರ್ಥಿಗೆ ಮತ ಹಾಕಿಲ್ಲಾ ಎಂಬ ಕಾರಣಕ್ಕೆ ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆಯಲ್ಲದೆ ರಾಜಕೀಯ ದ್ವೇಷಕ್ಕೆ ನಾಂದಿಯಾಡುತ್ತಿದೆ.

ಇವಿಎಂ ಮತದಾನಕ್ಕೆ ಬಳಸಲು ಆರಂಭಿಸುವ ಮುನ್ನ ಪ್ರತಿ ಚುನಾವಣೆಯಲ್ಲಿ ಚಲಾವಣೆಗೈದ ಎಲ್ಲಾ ಬ್ಯಾಲೆಟ್ ಪೇಪರ್ ಗಳನ್ನು ಒಟ್ಟಾಗಿ ಕಲೆಹಾಕಿ ಎಣಿಕೆ ಮಾಡುತ್ತಿದ್ದುದರಿಂದ ಬೂತ್ ಮಟ್ಟದ ಮತ ಎಣಿಕೆ ವಿವರ ಲಭ್ಯವಾಗುತ್ತಿರಲಿಲ್ಲಾ ಆದರೆ ಇಂದು ಎಲ್ಲಾ ವಿವರ ಬಹಿರಂಗ ವಾಗುತ್ತಿದೆ.

ಈ ರೀತಿ ಬೂತ್ ಮಟ್ಟದ ವಿವರಗಳನ್ನು ಬಹಿರಂಗ ಮಾಡಬಾರದು ಎಂದು ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಲಾಗಿತ್ತಾದರು ಸಹ ಇದನ್ನು ಪೂರ್ಣ ಪ್ರಮಾಣದಲ್ಲಿ ಪರಿಗಣಿಸಲಾಗಿಲ್ಲ. ಇದರ ನೇರ ಕೆಟ್ಟ ಪರಿಣಾಮ ಮತದಾರರ ಮೇಲೆ ಬೀಳುತ್ತಿದೆ.

ಲೋಕಸಭಾ ಚುನಾವಣೆ ಮುಗಿದಿದೆ ಹಾಗೂ ಫಲಿತಾಂಶವೂ ಹೊರಬಿದ್ದಿದೆ ಮೇಲೆ ವಿವರಿಸಿರುವಂತೆ ಮಂಡ್ಯ, ತುಮಕೂರು, ಹಾಸನ, ಮೈಸೂರು ಸೇರಿದಂತೆ ಹಲವು ಕ್ಷೇತ್ರದ ಬೂತ್ ಮಟ್ಟದ ಮತದಾರರ ವಿವರ ಬಹಿರಂಗವಾಗಿದೆ. ಉದಾಹರಣೆಗೆ ಮಂಡ್ಯ ಫಲಿತಾಂಶಕ್ಕೆ ಈಗಾಗಲೇ ಅಲ್ಲಿನ ಜೆಡಿಎಸ್ ಶಾಸಕರು ಕ್ಷೇತ್ರದಲ್ಲಿ ಸೋಲಿನ ಹೊಣೆಹೊತ್ತಿದ್ದಾರೆ ಹಾಗೂ ರಾಜ್ಯ ಹೈಕಮಾಂಡ್ ನಿಂದ ಅವರ ತಲೆದಂಡವಾಗೊ ಸಾಧ್ಯತೆ ಇದೆ.ಇನ್ನು ಇದರ ಪರಿಣಾಮ ಕ್ಷೇತ್ರದ ಜನರ ಮೇಲೆಯೇ ಬೀಳಲಿದೆ.

ಚುನಾವಣೆ ಮುಗಿದ ಬಳಿಕ ರಾಜಕೀಯ ದ್ವೇಷ ಮರೆತು ಕೇವಲ ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹಸಬೇಕಾಗಿದ್ದರೂ ಇಂತಹ ತಲೆದಂಡದಂಥ ಕೆಲಸದಿಂದ ತೊಂದರೆ ತಪ್ಪಿದಲ್ಲ. ಇನ್ನಾದರು ಚುನಾವಣಾ ವಿವರ ಬಿಡುಗಡೆ ಮಾಡುವ ಮುನ್ನಾ ಸ್ವಲ್ಪ ಯೋಚಿಸಬೇಕಿದೆ ಮಾಹಿತಿ ನೀಡಲಿ ಆದರೆ ವಾರ್ಡ್,ಬೂತ್ ಹಾಗೂ ಗ್ರಾಮದ ಲೆಕ್ಕದಲ್ಲಿ ಮತದಾರರ ವಿವರ ಬಹಿರಂಗ ಸರಿಯಲ್ಲ ಎಂಬುದು ಪ್ರಜಾವಂತ ನಾಗರಿಕರ ಮನವಿಯಾಗಿದೆ.
– ಸಂತೋಷ್.ಸಿ ಬಿ, ಹಾಸನ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ