ಚಿರತೆ ಬಾಯಿಗೆ ಆಹಾರವಾಗುತ್ತಿದ್ದ ತನ್ನೊಡತಿಯ ರಕ್ಷಿಸಿದ ‘ಟೈಗರ್’..!

ಈ ಸುದ್ದಿಯನ್ನು ಶೇರ್ ಮಾಡಿ

ಡಾರ್ಜಿಲಿಂಗ್, ಆ.18- ನಾಯಿ ನಿಯತ್ತಿನ ಪ್ರಾಣಿ. ಶ್ವಾನ ಸ್ವಾಮಿ ನಿಷ್ಠೆಗೂ ಅನ್ವರ್ಥನಾಮ. ಅಪಾಯದ ಸಂದರ್ಭದಲ್ಲಿ ಪ್ರಾಣವನ್ನೂ ಲೆಕ್ಕಿಸದೇ ತನ್ನ ಮಾಲೀಕರನ್ನು ಸಾಕುಪ್ರಾಣಿಗಳು ರಕ್ಷಿಸಿದ ಉದಾಹರಣೆಗಳೂ ಇವೆ.

ಇಂಥ ಮತ್ತೊಂದು ಸಂಗತಿ ಪಶ್ಚಿಮ ಬಂಗಾಳದ ವಿಶ್ವವಿಖ್ಯಾತ ಡಾರ್ಜಿಲಿಂಗ್ ಗಿರಿಧಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ನಾಲ್ಕು ವರ್ಷದ ಟೈಗರ್ ಹೆಸರಿನ ಸಾಕು ನಾಯಿ ಆಗಸ್ಟ್ 14ರಂದು ರಾತ್ರಿ 8.30ರಲ್ಲಿ ನಯಾ ಗಾಂವ್(ನೊನಾದಾ) ಪ್ರದೇಶದಲ್ಲಿ ತನ್ನ ಒಡತಿ ಅರುಣಾ ಲಾಮಾ ಅವರನ್ನು ಚಿರತೆ ದಾಳಿಯಿಂರ ರಕ್ಷಿಸಿದೆ.

ಹೆಸರಿಗೆ ತಕ್ಕಂತೆ ಈ ಶ್ವಾನ ಟೈಗರ್‍ನಂತೆ ದಿಟ್ಟತನ ಪ್ರದರ್ಶಿಸಿ ಚಿರತೆಯನ್ನು ಓಡಿಸುವಲ್ಲಿ ಯಶಸ್ವಿಯಾಗಿದೆ. ಘಟನೆ ವಿವರ: ಅರುಣಾ ಲಾಮಾ (58) ಅಂದು ರಾತ್ರಿ ತನ್ನ ಮನೆಯ ಮಹಡಿಯಿಂದ ಕೆಳಗೆ ಇಳಿದು ಬಂದಾಗ ಕತ್ತಲಲ್ಲಿ ಎರಡು ಹೊಳೆಯುವ ಕಣ್ಣುಗಳು ಕಾಣಿಸಿದವು. ಅದು ಏನೆಂದು ತಿಳಿಯುವ ಮೊದಲೇ ಚಿರತೆ ಆಕೆಯ ಮೇಲೆ ದಾಳಿ ನಡೆಸಿತು.

ಈ ಸಂದರ್ಭದಲ್ಲಿ ಮನೆಯ ಹೊರಗೆ ಇದ್ದ ಟೈಗರ್ ತಕ್ಷಣ ಮುನ್ನುಗ್ಗಿ ಜೋರಾಗಿ ಬೊಗಳಿ ಚಿರತೆ ಜೊತೆ ಸೆಣಸಲು ಸಜ್ಜಾಯಿತು. ಶ್ವಾನದ ಧೈರ್ಯ ಕಂಡು ಬೆಚ್ಚಿದ ದೊಡ್ಡ ಬೆಕ್ಕು ಅಲ್ಲಿಂದ ಪರಾರಿಯಾಯಿತು. ಟೈಗರ್ ಬರುವುದು ತಡವಾಗಿದ್ದರೆ ಅರುಣಾ ಪ್ರಾಣಕ್ಕೆ ಅಪಾಯವಾಗುತ್ತಿತ್ತು.

ಅವರಿಗೆ ವನ್ಯಜೀವಿ ಕಚ್ಚಿದ ಗಾಯಗಳೂ ಆಗಿವೆ. ಸೊನಾದಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಡಾರ್ಜಿಲಿಂಗ್‍ನ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿರತೆ ದಾಳಿಯಿಂದ ಗಾಯಗೊಂಡಿರುವ ಅರುಣಾ ಅವರ ಹಣೆ ಮತ್ತು ಕಿವಿಗಳ ಬಳಿ 20 ಹೊಲಿಗೆಗಳನ್ನು ಹಾಕಲಾಗಿದೆ. ಅರುಣಾ ಪ್ರಾಣಾಪಯಾದಿಂದ ಪಾರಾಗಿದ್ದಾರೆ.

ನಮ್ಮ ಮನೆಯ ಶ್ವಾನ ನನ್ನ ತಾಯಿಯನ್ನು ಚಿರತೆಯಿಂದ ರಕ್ಷಿಸಿದೆ. ಅದರ ಧೈರ್ಯ ಮತ್ತು ದಿಟ್ಟತನವನ್ನು ನಾವು ಎಷ್ಟು ಹೊಗಳಿದರೂ ಸಾಲದು ಎಂದು ಅರುಣಾ ಅವರ ಪುತ್ರಿ ಸ್ಮತಿ ಹೇಳಿದ್ದಾರೆ.

ಈ ಪ್ರದೇಶದಲ್ಲಿ ಎರಡು ಚಿರತೆಗಳಿರುವ ಸಾಧ್ಯತೆ ಇದ್ದು, ನಿವಾಸಿಗಳಿಗೆ ಸೂಕ್ತ ರಕ್ಷಣೆ ಮತ್ತು ದಾಳಿಗೆ ಒಳಗಾದವರಿಗೆ ಪರಿಹಾರ ನೀಡುವಂತೆ ನಾವು ಅರಣ್ಯ ಇಲಾಖೆಗೆ ಮನವಿ ಮಾಡಿರುವುದಾಗಿ ಈ ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಗರಿಕರಿಗೆ ಉಪಟಳ ನೀಡುತ್ತಿರುವ ಚಿರತೆಗಳನ್ನು ಜೀವಂತವಾಗಿ ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಬೋನು ಇಟ್ಟಿದ್ದಾರೆ. ಅಲ್ಲದೇ ವನ್ಯಜೀವಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Facebook Comments

Sri Raghav

Admin