ಕೊರೋನಾ ಸೋಂಕು-ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ 2ನೇ ಸ್ಥಾನಕ್ಕೇರಿದ ಬ್ರೆಜಿಲ್..!
ರಿಯೋ-ಡಿ-ಜನೈರೋ, ಮೇ 23- ಕೊರೊನಾ ವೈರಸ್ ದಾಳಿಯಿಂದ ನಲುಗುತ್ತಿರುವ ಬ್ರೆಜಿಲ್ ವಿಶ್ವದಲ್ಲೇ ಎರಡನೇಅತಿ ಹೆಚ್ಚು ಸೋಂಕು ಮತ್ತು ಸಾವು ಪ್ರಕರಣಗಳ ರಾಷ್ಟ್ರವಾಗಿದೆ.
ಸಾಂಬಾ ನಾಡು ಬ್ರೆಜಿಲ್ನಲ್ಲಿ ಸುಮಾರು 3.31 ಲಕ್ಷ ಮಂದಿಗೆ ಕೋವಿಡ್-19 ಸಾಂಕ್ರಾಮಿಕ ರೋಗತಗುಲಿದ್ದು, ಮೃತರ ಸಂಖ್ಯೆ 21,000ಕ್ಕೇರಿದೆ. ವಿಶ್ವದಲ್ಲಿ ಅಮೆರಿಕ ನಂತರ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ರಷ್ಯಾವನ್ನು ಹಿಂದಿಕ್ಕಿದೆ.
ಅಮೆರಿಕದ ವಾಷಿಂಗ್ಟನ್ನ ಜಾನ್ಸ್ ಹಾಪ್ಕಿನ್ಸ್ಯೂನಿವರ್ಸಿಟಿಯ ಅಂಕಿ ಅಂಶಗಳ ಪ್ರಕಾರ ಲ್ಯಾಟಿನ್ ಆಮೆರಿಕ ದೇಶದಲ್ಲಿ ಈವರೆಗೆ 3,30,890 ಮಂದಿಗೆ ಸೋಂಕು ದೃಢಪಟ್ಟಿದ್ದು, 21,000ಕ್ಕೂ ಹೆಚ್ಚು ರೋಗಿಗಳು ಸಾವಿಗೀಡಾಗಿದ್ದಾರೆ.
ಬ್ರೆಜಿಲ್ನಲ್ಲಿ ಕಳೆದ 24 ತಾಸುಗಳಲ್ಲಿ 1,001 ಮಂದಿಯನ್ನು ಕಿಲ್ಲರ್ ಕೊರೊನಾ ಬಲಿ ತೆಗೆದುಕೊಂಡಿದೆ. ಪ್ರತಿದಿನ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಬ್ರೆಜಿಲ್ನ ಬಹುತೇಕ ಎಲ್ಲ ನಗರಗಳು ಮತ್ತು ಪಟ್ಟಣಗಳು ವೈರಸ್ ದಾಳಿಯಿಂದ ಬಾಧಿತವಾಗಿವೆ.