ಭಾರತೀಯ ಕೋವಿಡ್-19 ಲಸಿಕೆಗೆ ಬೇಡಿಕೆಯಿಟ್ಟ ಬ್ರೆಜಿಲ್
ಸಾವೊ ಪೋಲೊ, ಫೆ.26 (ಎಪಿ)- ಬ್ರೆಜಿಲ್ ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ವ್ಯಾಪಿಸಿ 2 ಲಕ್ಷ 50 ಸಾವಿರ ರೋಗಿಗಳು ಸಾವನ್ನಪ್ಪಿರುವ ಭಯಾನಕ ದುರಂತ ನಿರ್ಮಾಣವಾದ ಹಿನ್ನೆಲೆಯಲ್ಲಿ, ಆ ದೇಶದ ಆರೋಗ್ಯ ಸಚಿವಾಲಯ 20 ದಶಲಕ್ಷ ಕೊವಾಕ್ಸಿನ್ ಲಸಿಕೆ ಪೂರೈಸಲು ಭಾರತೀಯ ಫಾರ್ಮಾಸ್ಯುಟಿಕಲ್ ಕಂಪನಿ ಭಾರತ್ ಬಯೋಟೆಕ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಭಾರತದಲ್ಲಿ ಕೋವಿಡ್-19ಗೆ ನಿಯಂತ್ರಣ ಹಾಗೂ ವಿಶ್ವದ ವಿವಿಧ ದೇಶಗಳಿಗೆ ಲಸಿಕೆ ಪೂರೈಸಿರುವುದನ್ನು ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿರುವುದು. ಈ ಒಪ್ಪಂದವೇರ್ಪಡಲು ಸಹಕಾರಿಯಾಗಿದೆ. ಆದರೆ, ಒಡಂಬಡಿಕೆ ಪ್ರಕಾರ ಕೊವಾಕ್ಸಿನ್ ಲಸಿಕೆ ಪೂರೈಸಲು ಭಾರತೀಯ ನಿಯಂತ್ರಕರು ಅನುಮೋದಿಸಬೇಕಿರುವುದು ಮಾತ್ರ ಬಾಕಿ ಉಳಿದಿದೆ.
8 ದಶಲಕ್ಷ ಕೊವಾಕ್ಸಿನ್ ಶಾಟ್ಸ್ಗಳನ್ನು ಬ್ರೆಜಿಲಿಯನ್ ಕಂಪನಿ ಪ್ರೆಸಿಸಾ ಮೆಡಿಕಾಮೆಂಟೋಸ್ ತಯಾರಿಸಿ ಮಾರ್ಚ್ರೊಳಗೆ ಪೂರೈಸಲಿದೆ. ಎರಡನೇ ಹಂತದ ಪೂರೈಕೆಯಲ್ಲಿ ಮತ್ತೆ ಎಂಟು ದಶಲಕ್ಷ ಡೋಸ್ಗಳನ್ನು ಏಪ್ರಿಲ್ ಅಥವಾ ಮೇ ನಲ್ಲಿ ದೊರಕಲಿದೆ. ಉಳಿದ ನಾಲ್ಕು ಮಿಲಿಯನ್ ಡೋಸ್ಗಳು ಪ್ರಸ್ತುತ ಲಭ್ಯವಿರುತ್ತವೆ ಎಂದು ಇಲ್ಲಿನ ಅಧ್ಯಕ್ಷ ಜೈರ್ ಬೊಲ್ಸೊನಾರೋ ಅವರು ಆಡಳಿತ ತಿಳಿಸಿದೆ.
ಕೊರೊನಾ ಲಸಿಕೆ ನೀಡುವ ಅಭಿಯಾನದಲ್ಲಿ ಬ್ರೆಜಿಲ್ ಇದುವರೆಗೆ ಶೇ.4 ರಷ್ಟು ಅಂದರೆ ಸುಮಾರು 2 ಕೋಟಿ 10 ಲಕ್ಷ ನಾಗರಿಕರಿಗೆ ಮಾತ್ರ ನೀಡಿರುವುದು ತಿಳಿದುಬಂದಿದೆ. ಕೆಲವು ನಗರಗಳಲ್ಲಿ ಲಸಿಕೆ ಕೊರತೆಯಿಂದ ರೋಗನಿರೋಧಕ ಅಭಿಯಾನವನ್ನು ಕಳೆದ ವಾರದಿಂದ ನಿಲ್ಲಿಸಲಾಗಿದೆ.
ಭಾರತ್ ಬಯೋಟೆಕ್ ಆಗಲಿ ಪ್ರೆಸಿಸಾ ಮೆಡಿಕಾಮೆಂಟೋಸ್ ಆಗಲಿ ಲಸಿಕೆ ಪೂರೈಸುವ ದಿನಗಳನ್ನು ನಿಗದಿಪಡಿಸಿಲ್ಲ ಎಂದು ತಿಳಿದುಬಂದಿದೆ.