ಬೃಂದಾವನ್ ಪ್ರಾಪರ್ಟೀಸ್ ಮಾಲೀಕ ದಿನೇಶ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.2-ನಿವೇಶನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಬೃಂದಾವನ ಪ್ರಾಪರ್ಟೀಸ್ ಮಾಲೀಕ ದಿನೇಶ್ ಗೌಡನನ್ನು ಹಾಸನದ ಅರಕಲಗೂಡು ತಾಲ್ಲೂಕಿನಲ್ಲಿ ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದಿನೇಶ್ ಗೌಡ ವಿರುದ್ಧ ಇದುವರೆಗೂ 1200ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ತಾವು ನಿವೇಶನಕ್ಕಾಗಿ ನೀಡಿರುವ ಹಣವನ್ನು ವಾಪಸ್ ಕೊಡಿಸಬೇಕೆಂದು ನಿನ್ನೆ 500ಕ್ಕೂ ಹೆಚ್ಚು ಮಂದಿ ರಾಜಾಜಿನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಆರೋಪಿ ದಿನೇಶ್ ಗೌಡ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆತನ ಬಂಧನಕ್ಕೆ ಪೊಲೀಸರ ತಂಡ ರಚಿಸಲಾಗಿತ್ತು. ಈ ತಂಡ ಹಲವು ಆಯಾಮಗಳಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು.

ಆರೋಪಿ ದಿನೇಶ್ ಗೌಡ ನಿನ್ನೆ ರಾತ್ರಿ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಇರುವ ಬಗ್ಗೆ ಈ ತಂಡಕ್ಕೆ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಅರಕಲಗೂಡಿಗೆ ತೆರಳಿ ದಿನೇಶ್‍ಗೌಡನನ್ನು ಬಂಧಿಸಿದ್ದು, ಬೆಂಗಳೂರಿಗೆ ಕರೆತರುತ್ತಿದ್ದಾರೆ. ನಾಗರಬಾವಿ ನಿವಾಸಿ ದಿನೇಶ್ ಗೌಡ ಎಂಬುವರು ರಾಜಾಜಿನಗರದಲ್ಲಿ ಬೃಂದಾವನ ಪ್ರಾಪರ್ಟೀಸ್ ಎಂಬ ಕಚೇರಿ ತೆರೆದಿದ್ದು, ಕಡಿಮೆ ಹಣಕ್ಕೆ ನಿವೇಶನ ಕೊಡುವುದಾಗಿ ಹಲವಾರು ಜನರಿಂದ ಲಕ್ಷಾಂತರ ರೂ. ಪಡೆದು ಸುಮಾರು 5 ಕೋಟಿ ಸಂಗ್ರಹಿಸಿಕೊಂಡು ನಾಪತ್ತೆಯಾಗಿದ್ದಾನೆ ಎಂಬ ಸುದ್ದಿ ಹರಡುತ್ತಿದ್ದಂತೆ ಕಳೆದ ವಾರ ಹಣಕೊಟ್ಟವರು ಕಚೇರಿ ಬಳಿ ಜಮಾಯಿಸಿದ್ದರು.

ಆ ಸಂದರ್ಭದಲ್ಲಿ ರಾಜಾಜಿನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ದಿನೇಶ್ ಗೌಡ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿ ಪ್ರತಿಭಟನೆ ನಡೆಸುತ್ತಿದ್ದವರ ಮನವೊಲಿಸಿ ಕಳುಹಿಸಿದ್ದರು. ದಿನೇಶ್ ಗೌಡ ದೃಶ್ಯ ಮಾಧ್ಯಮಗಳ ಮೂಲಕ ಕಡಿಮೆ ಮೊತ್ತಕ್ಕೆ ನಿವೇಶನ ಕೊಡುವುದಾಗಿ ಜಾಹಿರಾತು ನೀಡಿದ್ದನು. ಅದನ್ನು ನಂಬಿದ ಹಲವಾರು ಶ್ರಮಿಕ ವರ್ಗದವರು 2016ರಿಂದಲೂ 2 ಲಕ್ಷ, 5 ಲಕ್ಷ ಹೀಗೆ 10 ಲಕ್ಷ ರೂ.ವರೆಗೂ ನೀಡಿದ್ದರು. ಹಣ ಕೊಟ್ಟು ಹಲವರಿಗೆ ಅಗ್ರಿಮೆಂಟ್ ಸಹ ಮಾಡಿಕೊಡಲಾಗಿತ್ತು.

ಆದರೆ ಒಂದೇ ನಿವೇಶನವನ್ನು ನಾಲ್ಕೈದು ಮಂದಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ. ಅಲ್ಲದೆ ದಿನೇಶ್ ಗೌಡ ಸೂಚಿಸಿದ ಜಾಗದಲ್ಲಿ ಯಾವುದೇ ನಿವೇಶನವಿಲ್ಲ ಎಂದು ತಿಳಿದು ಹಣ ಕಳೆದುಕೊಂಡವರು ಪೊಲೀಸ್ ಠಾಣೆ ಮೆಟ್ಟಿಲೇರಿ ಹಣ ವಾಪಸ್ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ನಿವೇಶನಕ್ಕಾಗಿ ಹಣ ಕೊಟ್ಟು ಮೋಸ ಹೋದ ಸಾವಿರಾರು ಮಂದಿ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದೀಗ ರಾಜಾಜಿನಗರ ಠಾಣೆ ಪೊಲೀಸರು ದಿನೇಶ್ ಗೌಡನನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ದಿನೇಶ್ ಗೌಡ ಪೊಲೀಸರ ಮುಂದೆ ಹೇಳಿಕೆಗಳನ್ನು ನೀಡಿದ್ದು, ತಾನು ಹಣ ಪಡೆದು ಯಾರಿಗೂ ಮೋಸ ಮಾಡಿಲ್ಲ. ಕಳೆದೆರಡು ವರ್ಷದಿಂದ ಲಾಕ್‍ಡೌನ್ ಇದ್ದ ಕಾರಣ ರಿಯಲ್ ಎಸ್ಟೇಟ್ ವ್ಯವಹಾರ ನಡೆಯುತ್ತಿರಲಿಲ್ಲ. ಆರ್ಥಿಕವಾಗಿ ಸಾಕಷ್ಟು ಹಿನ್ನಡೆಯಾಗಿತ್ತು.

ಮುಂದಿನ ದಿನಗಳಲ್ಲಿ ಹಣ ನೀಡಿದವರೆಲ್ಲರಿಗೂ ನಿವೇಶನ ಕೊಡುತ್ತೇನೆ. ಇಲ್ಲವೆ ಹೂಡಿಕೆ ಮಾಡಿರುವ ಹಣವನ್ನು ಹಿಂದಿರುಗಿಸುತ್ತೇನೆ ಎಂದು ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ.

Facebook Comments