ನಾಪತ್ತೆಯಾದ 114 ಮಂದಿಯಿಂದ ಮತ್ತಷ್ಟು ಹೆಚ್ಚಿದ ರೂಪಾಂತರ ವೈರಸ್ ಭೀತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.5- ಬ್ರಿಟನ್‍ನಿಂದ ವಾಪಸಾಗಿ ನಾಪತ್ತೆಯಾಗಿರುವ 114 ಮಂದಿಯನ್ನು ಪತ್ತೆ ಹಚ್ಚಲು ಇದುವರೆಗೂ ಸಾಧ್ಯವಾಗದಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದ್ದು , ಅವರಿಂದ ನಗರದಲ್ಲಿ ರೂಪಾಂತರ ವೈರಸ್ ಹಾವಳಿ ಹೆಚ್ಚಾಗುವ ಸಾಧ್ಯತೆಗಳಿವೆ.

ಡಿಸೆಂಬರ್ ಅಂತ್ಯದಲ್ಲಿ 4,348 ಪ್ರಯಾಣಿಕರು ಬ್ರಿಟನ್‍ನಿಂದ ವಾಪಸಾಗಿದ್ದರು. ಇವರಲ್ಲಿ 2465 ಮಂದಿ ಬೆಂಗಳೂರಿನ ನಿವಾಸಿಗಳೇ ಆಗಿದ್ದು , ಅವರನ್ನೆಲ್ಲಾ ಪತ್ತೆ ಹಚ್ಚಿ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಆದರೆ ಬ್ರಿಟನ್‍ನಿಂದ ವಾಪಸಾದ 114 ಮಂದಿ ಮಾತ್ರ ಇದುವರೆಗೂ ಪತ್ತೆಯಾಗಿಲ್ಲ.

ಬಿಬಿಎಂಪಿ ದಾಖಲೆಯಲ್ಲಿ 114 ಮಂದಿ ನಾಪತ್ತೆಯಾಗಿದ್ದಾರೆ ಎಂದು ನಮೂದಾಗಿದ್ದರೂ ಆರೋಗ್ಯ ಸಚಿವರು ಕೇವಲ 75 ಮಂದಿ ಪತ್ತೆಯಾಗಿಲ್ಲ ಎಂದು ತದ್ವಿರುದ್ಧ ಹೇಳಿಕೆ ನೀಡುತ್ತಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ನಾಪತ್ತೆಯಾದವರನ್ನು 48 ಗಂಟೆಯಲ್ಲಿ ಪತ್ತೆ ಮಾಡಲಾಗುವುದು ಎಂದು ಗೃಹ ಇಲಾಖೆ ಹೇಳಿಕೆ ನೀಡಿ ಮೂರು ದಿನ ಕಳೆದರೂ ಇದುವರೆಗೂ ನಾಪತ್ತೆಯಾದವರ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಬಿಬಿಎಂಪಿ ಅಧಿಕಾರಿಗಳು, ಆರೋಗ್ಯ ಇಲಾಖೆ ಮತ್ತು ಗೃಹ ಇಲಾಖೆ, ಸಹಾಯ ಕೋರಿದರೂ ನಾಪತ್ತೆಯಾದವರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.

ನಾಪತ್ತೆಯಾಗಿರುವ 114 ಮಂದಿ ತಮ್ಮ ಮೊಬೈಲ್ ಫೋನ್‍ಗಳನ್ನು ಹಾಗೂ ಸಿಮ್‍ಗಳನ್ನು ಬದಲಾಯಿಸಿಕೊಂಡು ಪರ್ಯಾಯ ಸ್ಥಳದಲ್ಲಿ ವಾಸಿಸುತ್ತಿರುವ ಶಂಕೆ ವ್ಯಕ್ತವಾಗಿದೆ.ನಾಪತ್ತೆಯಾದ ಎಲ್ಲರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡುತ್ತಿದ್ದರೂ ಇದುವರೆಗೂ ನಾಪತ್ತೆಯಾದ ಒಬ್ಬನೇ ಒಬ್ಬ ವ್ಯಕ್ತಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ನಾಪತ್ತೆಯಾದವರನ್ನು ಪತ್ತೆ ಹಚ್ಚಲು ಏಕಿಷ್ಟು ವಿಳಂಬ. ಬ್ರಿಟನ್‍ನಿಂದ ಆಗಮಿಸಿ ತಲೆಮರೆಸಿಕೊಂಡಿರುವ 114 ಮಂದಿಗೆ ರೂಪಾಂತರ ಕೊರೊನಾ ವೈರಸ್ ಅಟ್ಯಾಕ್ ಆಗಿದ್ದರೆ ಅಕ್ಕ ಪಕ್ಕದ ನಿವಾಸಿಗಳ ಪಾಡೇನು? ತಲೆಮರೆಸಿಕೊಂಡಿರುವ ಈ 114 ಮಂದಿ ಬೆಂಗಳೂರಿಗೆ ಡೇಂಜರ್ ಆಗಿ ಪರಿವರ್ತನೆಯಾದರೂ ಆಶ್ಚರ್ಯ ಪಡುವಂತಿಲ್ಲ.

Facebook Comments