ಬ್ರಿಟನ್‍ನಿಂದ ಭಾರತಕ್ಕೆ ಆಗಮಿಸಿದ್ದ ಕೆಲವರಲ್ಲಿ ಹೊಸ ವೈರಸ್ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.25- ತೀವ್ರ ಆತಂಕದ ನಡುವೆ ಇಂಗ್ಲೆಂಡ್‍ನಿಂದ ಭಾರತಕ್ಕೆ ಬಂದಿರುವ 25 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಅವರಲ್ಲಿ ಹೊಸ ತಳಿಯ ಸೋಂಕಿರುವ ಶಂಕೆ ವ್ಯಕ್ತವಾಗಿವೆ. ಇಂಗ್ಲೆಂಡ್‍ನಲ್ಲಿ ಕಂಡು ಬಂದಿರುವ  ಕೊರೊನಾ ಸೋಂಕು ಭಾರತವನ್ನು ಆತಂಕಕ್ಕೀಡು ಮಾಡಿದೆ. ಹಲವಾರು ದಿನಗಳಿಂದ ಅಲ್ಲಿಂದ ಬಂದಿರುವ ಬಹಳಷ್ಟು ಮಂದಿಯನ್ನು ಯಾವುದೇ ಪರೀಕ್ಷೆಗೆ ಒಳ ಪಡಿಸದೇ ದೇಶದ ಒಳಗೆ ಬಿಟ್ಟುಕೊಳ್ಳಲಾಗಿತ್ತು.

ಕಳೆದ ವಾರ ಇಂಗ್ಲೆಂಡ್‍ನಲ್ಲಿ ಹೊಸ ತಳಿಯ ಸೋಂಕು ಹೆಚ್ಚಾಗಿದ್ದರಿಂದ ಲಾಕ್‍ಡೌನ್ ಘೋಷಣೆ ಮಾಡಲಾಯಿತು. ಅಲ್ಲಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ವಿದೇಶಿ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸುತ್ತಿದೆ. ಈವರೆಗೂ ಪರೀಕ್ಷೆಗೆ ಒಳ ಪಡಿಸಲಾದ ಹಲವರ ಪೈಕಿ 25 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ. ಅವರಲ್ಲಿ ಪತ್ತೆಯಾದ ಸೋಂಕು ಹೊಸ ತಳಿಯ ಗುಣಲಕ್ಷಣಗಳನ್ನು ಹೊಂದಿರುವ ಅನುಮಾನಗಳಿವೆ. ಹೀಗಾಗಿ ಆರ್‍ಟಿಪಿಸಿಆರ್ ಪರೀಕ್ಷೆ ಜೊತೆಗೆ ಹೊಸ ತಳಿಯ ಸಂಶೋಧನೆ ಕೂಡ ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲೇ 12 ಮಂದಿ ಇಂಗ್ಲೆಂಡ್ ಪ್ರವಾಸ ಮಾಡಿದವರು ಸೋಂಕಿತರಾಗಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಜನರಲ್ಲಿ ಮನವಿ ಮಾಡಿದ್ದು, ಕಳೆದ ಆರು ವಾರಗಳ ಹಿಂದೆ ಇಂಗ್ಲೆಂಡ್‍ನಿಂದ ಬಂದವರು ಸ್ವಯಂ ಕೊರೊನಾ ಪರೀಕ್ಷೆಗೆ ಒಳ ಪಡುವಂತೆ ಕರೆ ನೀಡಿದ್ದಾರೆ.

ಮೇಘಾಲಯದಲ್ಲಿ ವಿದೇಶದಿಂದ ಬಂದವರನ್ನು ಸಂಪೂರ್ಣ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ತೆಲಂಗಾಣದಲ್ಲಿ ಇಂಗ್ಲೆಂಡ್‍ನಿಂದ ಬಂದ ಏಳು ಮಂದಿ ಕೊರೊನಾ ಸೋಂಕಿತರಾಗಿದ್ದಾರೆ. ಅವರ ಮಾದರಿಗಳನ್ನು ಸೆಲ್ಯೂಲಾರ್ ಮತ್ತು ಮೊಲೆಕ್ಲೂಲಾರ್ ಬಯೋಲಾಜಿಕಲ್ ಕೇಂದ್ರಕ್ಕೆ ಕಳುಹಿಸಲಾಗಿದೆ. ಡೆನ್ಮಾರ್ಕ್, ಬೆಲ್ಜಿಯಂ, ನೆದರ್‍ಲ್ಯಾಂಡ್, ಆಸ್ಟ್ರೇಲಿಯಾ, ಸೌತ್‍ಆಫ್ರಿಕಾ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಹೊಸ ತಳಿಯ ಕೊರೊನಾ ಅಬ್ಬರಿಸುತ್ತಿದೆ. ಆದರೆ ಈವರೆಗೂ ಭಾರತದಲ್ಲಿ ಅದರ ಪ್ರಭಾವ ಕಾಣಿಸಿಕೊಂಡಿಲ್ಲ.

ಇಂಗ್ಲೆಂಡ್‍ನಲ್ಲಿ ಶೇ.70ರಷ್ಟು ವೇಗವಾಗಿ ಹಬ್ಬುತ್ತಿರುವ ರೂಪಾಂತರ ಸೋಂಕು ವಿದೇಶಿ ಪ್ರಯಾಣಿಕರ ಮೂಲಕ ಭಾರತಕ್ಕೂ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಅಧಿಕೃತವಾಗಿ ಈವರೆಗೂ ಎಲ್ಲಿಯೂ ಹೊಸ ಸೋಂಕು ಕಾಣಿಸಿಕೊಂಡಿರುವ ವರದಿಯಾಗಿಲ್ಲ. ಆದರೂ ಇಂಗ್ಲೆಂಡ್‍ನಿಂದ ಬಂದವರನ್ನು ಕ್ವಾರಂಟೈನ್‍ನಲ್ಲಿಟ್ಟು ನಿಗಾ ವಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments