ಅನ್ನದಾತನ ಮಗಳಿಗೆ ಒಲಿದ ಕಂಚಿನ ಪದಕ

ಈ ಸುದ್ದಿಯನ್ನು ಶೇರ್ ಮಾಡಿ

ಗೋಲ್ಗಾಟ್, ಆ. 4- ರೈತರ ಮಕ್ಕಳು ಇಂದು ವಿಶ್ವದ ಅನೇಕ ರಂಗಗಳಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದರೆ, ಅದೇ ರೀತಿ ಇಂದು ನಡೆದ ಒಲಿಂಪಿಕ್ಸ್‍ನ ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರೈತನ ಪುತ್ರಿಯಾದ ಲವ್ಲೀನಾ ಇಡೀ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದಾರೆ. ಅಸ್ಸಾಮ್‍ನ ಗೋಲ್ಗಾಟ್‍ನ ಜಿಲ್ಲೆಯ ಕುಗ್ರಾಮವೊಂದರಲ್ಲಿ ಜನಿಸಿದ ಲವ್ಲೀನಾ ರೈತನ ಕುಟುಂಬದಲ್ಲಿ ಜನಿಸಿದರೂ ಕೂಡ ಚಿಕ್ಕಂದಿನಿಂದಲೂ ಒಂದು ದಿನ ಇಡೀ ದೇಶವೇ ತನ್ನತ್ತ ಒಂದು ದಿನ ತಿರುಗಿ ನೋಡಬೇಕೆಂಬ ಕನಸನ್ನು ಹೊತ್ತು ಬೆಳೆದರು.

ಚಿಕ್ಕ ವಯಸ್ಸಿನಲ್ಲೇ ಬಾಕ್ಸಿಂಗ್ ವಿಭಾಗದತ್ತ ಗಮನ ಹರಿಸಿದ ಲವ್ಲೀನಾರ ಹಾದಿ ಸುಲಭವಾಗೇನು ಇರಲಿಲ್ಲ, ಬಾಕ್ಸಿಂಗ್ ತರಬೇತಿ ಪಡೆಯಲು ಅಸ್ಸಾಮ್‍ನ ರಾಜಧಾನಿ ಡಿಸ್‍ಪುರ್‍ನಿಂದ 320 ಕಿಲೋಮೀಟರ್ ದೂರವಿರುವ ತನ್ನ ಗ್ರಾಮದಿಂದ ತೆರಳಿ ತರಬೇತಿ ಪಡೆಯುತ್ತಿದ್ದರು, ಲವ್ಲೀನಾ ಪಟ್ಟ ಕಷ್ಟಕ್ಕೆ ಇಂದು ಫಲ ದೊರೆತಿದೆ. ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಸಾರ್ಥಕತೆ ಪಡೆಸಿಕೊಂಡಿದ್ದಾರೆ.

ಕೊರೊನಾದಿಂದ ಕಳೆದ ವರ್ಷ ಲಾಕ್‍ಡೌನ್ ಆಗಿದ್ದಾಗ ತನ್ನ ತಂದೆ ಟಿಕನ್ ಬೊರ್ಗೊಹೆನ್‍ಗೆ ಲವ್ಲೀನಾ ಕೃಷಿಯಲ್ಲಿ ನೆರವಾಗಿದ್ದಳು. ಬಾಕ್ಸಿಂಗ್ ರಿಂಗ್‍ನಲ್ಲಿ ಎದುರಾಳಿಗಳಿಗೆ ಬಲಿಷ್ಠ ಪಂಚ್‍ಗಳನ್ನು ಕೊಡುವ ಮೂಲಕ ಪದಕಗಳನ್ನು ಗೆಲ್ಲುತ್ತ ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿದ್ದ ತನ್ನ ಪುತ್ರಿ ಭತ್ತದ ಗದ್ದೆಗೆ ಇಳಿದು ಸ್ವತಃ ನಾಟಿ ಮಾಡಿದ್ದಲ್ಲದೆ ಇತರ ಕೃಷಿ ಚಟುವಟಿಕೆಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ರೈತನ ಪುತ್ರಿ ಎಂಬುದನ್ನು ಬಿಂಬಿಸಿಕೊಂಡಿದ್ದಳು ಎಂದು ಲವ್ಲೀನಾ ತಂದೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

# ಅದೃಷ್ಟ ಬದಲಾಯಿಸಿದ ಏಷ್ಯಾನ್ ಕ್ರೀಡಾಕೂಟ:
ಬಾಕ್ಸಿಂಗ್ ವಿಭಾಗದಲ್ಲಿ ಮಹತ್ತರ ಸಾಧನೆ ಮಾಡಬೇಕೆಂಬ ಕನಸು ಹೊತ್ತಿದ್ದ ಲವ್ಲೀನಾಗೆ ಪಾಟಿಯಾಲಯದಲ್ಲಿ ನಡೆದ ಏಷ್ಯಾಕ್ರೀಡಾಕೂಟದಲ್ಲಿ ತೋರಿದ ಸಾಧನೆಯು ಅವರಿಗೆ ಟೋಕಿಯೋದ ಟಿಕೆಟ್ ಕೊಡಿಸಿದರು. ಟೋಕಿಯೋ ಒಲಿಂಪಿಕ್ಸ್‍ಗೆ ಅರ್ಹತೆ ಗಿಟ್ಟಿಸಿದ ಸುದ್ದಿ ತಿಳಿದ ನಂತರ ಯುರೋಪ್‍ನಲ್ಲಿ 52 ದಿನಗಳ ಕಾಲ ತರಬೇತಿಯನ್ನು ಪಡೆದುಕೊಂಡರು.

ಒಲಿಂಪಿಕ್ಸ್‍ನ ಆರಂಭಿಕ ಸುತ್ತಿನಿಂದಲೂ ಕಠಿಣ ಸವಾಲುಗಳು ಎದುರಾದರೂ ಕೂಡ ಅವುಗಳೆಲ್ಲವನ್ನೂ ಮೆಟ್ಟಿ ನಿಂತ ಲವ್ಲೀನಾ ಸೆಮಿಫೈನಲ್‍ನಲ್ಲಿ ಸೋಲು ಕಂಡರೂ ಕೂಡ ಕಂಚಿನ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಅವರ ಸಾಧನೆಯನ್ನು ಪ್ರಧಾನಿ ನರೇಂದ್ರಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೇರಿದಂತೆ ಹಲವು ಗಣ್ಯರು ಪ್ರಶಂಸೆಗಳ ಸುರಿಮಳೆ ಸುರಿಸಿದ್ದಾರೆ.

ಲವ್ಲೀನಾಗೆ ಅಭೂತಪೂರ್ವ ಸ್ವಾಗತ ಕೋರುವ ಸಲುವಾಗಿ ಅರ್ಜುನ ಪ್ರಶಸ್ತಿ ವಿಜೇತೆ ಲವ್ಲೀನಾ ವಾಸಿಸುತ್ತಿರುವ ಕುಗ್ರಾಮಕ್ಕೆ ಈಗ ಹೊಸ ಕಳೆ ಬಂದಿದೆ. ಎಷ್ಟೋ ವರ್ಷಗಳಿಂದ ಉತ್ತಮ ರಸ್ತೆಯನ್ನೇ ಕಾಣದ ಆ ಗ್ರಾಮಕ್ಕೆ ಈಗ ರಾಜಕಾರಣಿಗಳು ಹಾಗೂ ಸ್ಥಳೀಯ ಮುಖಂಡರು ಡಾಂಬರು ರಸ್ತೆ ನಿರ್ಮಿಸುವ ಮೂಲಕ ಆಕೆಯ ಸಾಧನೆಯನ್ನು ಕೊಂಡಾಡಿ ಗೌರವ ಸೂಚಿಸಿದ್ದಾರೆ.

Facebook Comments