ಈ ವಿಶೇಷ ಚೇತನ ಅಣ್ಣ-ತಂಗಿಗೆ ನೆರವು ನೀಡಿ ಪುಣ್ಯ ಕಟ್ಟಿಕೊಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

ಹನೂರು, ಸೆ.10- ಪೋಷಕರಿಲ್ಲದೆ ಊರಿನವರ ಅಲ್ಪ-ಸ್ವಲ್ಪ ನೆರವಿನಿಂದ ಸೂರು ಸೋರುತ್ತಿರುವ ಮನೆಯಲ್ಲಿ ಕಾಡು ಪ್ರಾಣಿಗಳಿಗಿಂತ ಕಡೆಯಾಗಿ ಹೀನಾಯ ಬದುಕು ಸವೆಸುತ್ತಿರುವ ಈ ವಿಶೇಷಚೇತನ ಅಣ್ಣ-ತಂಗಿಯರಿಗೆ ಬೇಕಿದೆ ಸರ್ಕಾರದ ನೆರವು.

ಇದು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೌಳಿ ಹಳ್ಳ ಡ್ಯಾಂ ಸಮೀಪದ ಸೋಲಿಗ ಸಮುದಾಯದ ಮಾದ (50) ಮತ್ತು ಆತನ ತಂಗಿ ರಂಗಿ (45) ಬದುಕಿನ ಕಥೆ. ಈ ವಿಶೇಷಚೇತನ ಅಣ್ಣ -ತಂಗಿಯರಿಗೆ ಊರಿನಲ್ಲಿರುವ ಸಂಬಂಧಿಕರೊಬ್ಬರು ಬಿಟ್ಟರೆ ಸ್ಥಳೀಯರೇ ಅನ್ನ ನೀರು ನೀಡುತ್ತಾ ಅನ್ನದಾತರೆನಿಸಿಕೊಂಡಿದ್ದಾರೆ.

ಸ್ವಾಧೀನವಿಲ್ಲದ ಕೈ -ಕಾಲು , ಕಿವುಡು ಮತ್ತು ಬುದ್ಧಿ ಮಾಂದ್ಯತೆ ಇರುವ ಮಾದನಿಗೆ 600 ರೂ.ಗಳ ಮಾಸಾಶನ ಬಿಟ್ಟರೆ ಬೇರೆ ಆದಾಯವಿಲ್ಲ. ಇನ್ನೂ ತಂಗಿ ರಂಗಿಗೆ ಅನಾರೋಗ್ಯ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ. ಮತದಾರರ ಗುರುತಿನ ಚೀಟಿ ಆಧಾರ್ ಕಾರ್ಡ್ ಯಾವುದು ಇಲ್ಲ. ಹಾಗಾಗಿ ರಂಗಿಗೆ ಪಿಂಚಿಣಿ ಹಣ ಇಲ್ಲ.

ಇವರಿಗೆ ಆದಿವಾಸಿ ಸೋಲಿಗರಿಗಾಗಿ ನಿರ್ಮಿಸಿರುವ ಪುಟ್ಟದೊಂದು ಸೂರು ಮಾತ್ರ ಇದೆ. ಇರುವ ಸೂರಿನ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದೆ. ಮಳೆ ಬಂದರೆ ಇಡೀ ಮನೆ ನೀರಿನಿಂದ ಆವೃತವಾಗುತ್ತದೆ. ಅಂತಹ ಮನೆಯಲ್ಲೇ ಈ ವಿಶೇಷಚೇತನ ಸೋದರ-ಸೋದರಿ ಜೀವನ ಸಾಗಿಸಿಕೊಂಡು ಬರುತ್ತಿದ್ದಾರೆ.

ಇನ್ನೂ ಸೂರಿನೊಳಗೆ ಇಣುಕಿ ನೋಡಿದರೆ ಯಾವುದೋ ಚಲನಚಿತ್ರದ ದೃಶ್ಯಾವಳಿಗಳನ್ನು ಮೀರಿಸುವಂತೆ ಇಲಿ-ಹೆಗ್ಗಣಗಳು ಕೊರೆದು ಗುಡ್ಡೆ ಹಾಕಿರುವ ಮಣ್ಣಿನ ರಾಶಿಗಳು ಎಲ್ಲೆಂದರೆಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪಾತ್ರೆ, ಪಗಡೆಗಳು ಮತ್ತು ಬಟ್ಟೆಗಳು ಕಂಡು ಬರುತ್ತದೆ.

ಇನ್ನೂ ಇವರ ಜೊತೆಯಲ್ಲೇ ಹಾವು, ಚೇಳು, ಇಲಿ, ಹೆಗ್ಗಣಗಳು ವಾಸಿಸುತ್ತಿದ್ದು ಅದರ ಅರಿವೇ ಇಲ್ಲದೆ ದಿನ ಕಳೆಯುತ್ತಿರುವ ಇವರ ಬದುಕು ಕಾಡು ಪ್ರಾಣಿ ಗಳಿಗಿಂತಲ್ಲೂ ಹೀನಾಯ ಸ್ಥಿತಿಯಲ್ಲಿದೆ.  ಜಳಕ ಮಾಡಿ 2 ವರ್ಷಗಳೇ ಕಳೆದಿವೆ.

ಕೊಳೆ ಬಟ್ಟೆ ಕೆದರಿದ ಕೂದಲು , ಮೈಗೆ ಅಂಟಿರುವ ಬೇವರಿನ ದುರ್ವಾಸನೆ ಮನೆಯೊಳಗೆ ಸೂಸುತ್ತಿರುವ ಗಬ್ಬುನಾಥ ಇದನ್ನೆಲ್ಲ ನಿತ್ಯ ನೋಡುತ್ತಿರುವ ಅಲ್ಲಿನ ಜನರು ಹೇಳುವುದೊಂದೇ ನಮ್ಮ ಶತ್ರುಗಳಿಗೂ ಇಂತಹ ಜೀವನ ಬೇಡ.

ಇಂತಹ ಹೀನಾಯ ಬದುಕು ಸವೆಸುತ್ತಿರುವ ಈ ಅಣ್ಣ-ತಂಗಿಯರಿಗೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಅನಾಥಾಶ್ರಮಕ್ಕೆ ಸೇರಿಸಿ ಅದರ ಖರ್ಚು-ವೆಚ್ಚಗಳನ್ನು ಸರ್ಕಾರ ಭರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ದೊಡ್ಡ ದೊಡ್ಡ ಊರುಗಳಲ್ಲಿ ಎಸಿ ರೂಮಿನಲ್ಲಿ ಕುಳಿತು ಕೈಲಾದವರ ನೆರವಿಗೆ ಧಾವಿಸುತ್ತಿವೆ ಎಂದು ಬೊಬ್ಬೆ ಹೊಡೆಯುವ ದೊಡ್ಡ ಮನುಷ್ಯರು ನಮ್ಮ ಊರಿಗೆ ಬಂದು ಈ ಅಣ್ಣ-ತಂಗಿಯರ ನೆರವಿಗೆ ಏಕೆ ಮನಸು ಮಾಡಿಲ್ಲ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಈಗಲೂ ಕಾಲ ಮಿಂಚಿಲ್ಲ. ಕೇವಲ ಪ್ರಚಾರಕ್ಕಾಗಿ ಸಮಾಜ ಸೇವೆ ಮಾಡುವುದನ್ನು ಬಿಟ್ಟು ಹನೂರಿನಲ್ಲಿ ಹೀನಾಯ ಬದುಕು ಸವೆಸುತ್ತಿರುವ ಈ ವಿಶೇಷ ಚೇತನ ಸೋದರ-ಸೋದರಿಯರ ಬದುಕು ಹಸನಾಗಿಸಲು ಸಂಬಂಧಪಟ್ಟವರು ಗಮನ ಹರಿಸಬೇಕು ಎಂಬುದೇ ಪತ್ರಿಕೆ ಉದ್ದೇಶವಾಗಿದೆ.

Facebook Comments