ಆಸ್ತಿ ಆಸೆಗೆ ಅಣ್ಣನಿಂದಲೇ ತಮ್ಮನ ಹತ್ಯೆ..

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಸೆ.17- ಕತ್ತು ಸೀಳಿ ಯುವಕನ ಬರ್ಬರ ಹತ್ಯೆ ಸಂಬಂಧ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಅರಕಲಗೂಡು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಮಹೇಶ್ (34) ಬಂಧಿತ ಆರೋಪಿ. ನಿನ್ನೆ ಅರಕಲಗೂಡು ತಾಲ್ಲೂಕಿನ ನೆಲಮನೆ ಹೊನ್ನವಳ್ಳಿ ಗ್ರಾಮದ ಬಳಿ ಜಲೇಂದರ್ ಎಂಬ ವ್ಯಕ್ತಿಯ ಬರ್ಬರ ಹತ್ಯೆಯಾಗಿತ್ತು.

ಹತ್ಯೆಯಾದ ಜಲೇಂದರ್ ಹಾಗೂ ಮಹೇಶ್ ಸಹೋದರರಾಗಿದ್ದು, ಇವರಿಗೆ ಬೆಲೆಬಾಳುವ ಜಮೀನಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಜತೆಗೆ ಮದುವೆ ಮಾಡುವಂತೆ ಜಲೇಂದರ್ ಕುಡಿದು ಬಂದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದ.

ಈ ಹಿನ್ನೆಲೆಯಲ್ಲಿ ಮಹೇಶ್ ತಮ್ಮನಿಗೆ ಕಂಠಪೂರ್ತಿ ಮದ್ಯ ಕುಡಿಸಿ ತಲೆಗೆ ಹೊಡೆದು ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಬೆಲೆಬಾಳುವ ಜಮೀನಿನ ಆಸೆಗೆ ಬಿದ್ದು ಸಹೋದರನ ಕೊಲೆ ಮಾಡಿರುವ ಅಣ್ಣನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments