ಕೋಟ್ಯಂತರ ರೂ. ಮೌಲ್ಯದ 436 ಕೆಜಿ ಬ್ರೌನ್ ಶುಗರ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಇಂಫಾಲ, ಅ.30 – ಈಶಾನ್ಯ ರಾಜ್ಯಗಳಲ್ಲಿ ಮಾದಕ ವಸ್ತು ತಯಾರಿಕೆ ಮತ್ತು ಕಳ್ಳ ಸಾಗಣೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಣಿಪುರದ ತೌಬಲ್ ಜಿಲ್ಲೆಯಲ್ಲಿ ಬ್ರೌನ್ ಶುಗರ್ ತಯಾರಿಕಾ ಘಟಕವೊಂದರ ಮೇಲೆ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ 436 ಕೆಜಿ ಬ್ರೌನ್ ಶುಗರ್ ಹಾಗೂ ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಮಾದಕ ವಸ್ತು ತಯಾರಿಕಾ ಘಟಕದ ಮಾಲೀಕ ಮಹಮ್ಮದ್ ಖಯೂಮ್ ಮತ್ತು ಆತನ ಪತ್ನಿ ಪರಾರಿಯಾಗಿದ್ದಾರೆ.

ಖಚಿತ ಸುಳುವಿನ ಮೇರೆಗೆ ಮಣಿಪುರ ಪೊಲೀಸರು ತೌಬಲ್ ಜಿಲ್ಲೆಯ ಮೋಯಿಝಂಗ್ ಎಂಬ ಪ್ರದೇಶದಲ್ಲಿನ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ 16 ಪೊಟ್ಟಣಗಳಲ್ಲಿದ್ದ 436 ಕೆಜಿ ತೂಕದ ಬ್ರೌನ್ ಶುಗರ್, 438 ಮಾರ್ಫಿನ್ ಮಾರ್ಪಡಿತ ದ್ರಾವಣ, 700 ಗ್ರಾಂ ಸುಣ್ಣ ಮತ್ತು ಒಂದು ದೊಡ್ಡ ಬಾಟಲ್‍ನ ಅಮೋನಿಯಾ ಕ್ಲೋರೈಡ್‍ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇವುಗಳ ತಯಾರಿಕೆಗೆ ಬಳಸುತ್ತಿದ್ದ ಯಂತ್ರೋಪಕರಣಗಳು, ಮೂರು ಗ್ಯಾಸ್ ಸಿಲಿಂಡರ್, ಮೋಟರ್ ಸೈಕಲ್ ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತೌಬಲ್ ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ಭೌಮ್‍ಚಾಸಿಂಗ್ ತಿಳಿಸಿದ್ದಾರೆ. ನಾಪತ್ತೆಯಾವರಿಗೆ ಶೋಧ ಮುಂದುವರೆದಿದೆ.

Facebook Comments