ಮಂಚನಬೆಲೆ ಜಲಾಶಯದ ಬಳಿ ಮತ್ತೊಂದು ಬೃಂದಾವನ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ, ಆ. 28-ಬೆಂಗಳೂರು ನಗರಕ್ಕೆ ಅತಿ ಹತ್ತಿರದಲ್ಲಿರುವ ರಾಮನಗರ ಜಿಲ್ಲೆಯನ್ನು ಟೂರಿಸಂ ಹಬ್‌ ಆಗಿ ಅಭಿವೃದ್ಧಿಪಡಿಸಲು ಸರಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿಎ.ಎನ್.‌ ಅಶ್ವತ್ಥನಾರಾಯಣ, ಮಂಚನಬೆಲೆ ಜಲಾಶಯದ ಕೆಳಗೆ ಕೆಆರ್‌ಆಸ್‌ ಮಾದರಿಯ ಬೃಂದಾವನವನ್ನು ನಿರ್ಮಿಸಲಾಗುವುದು ಎಂದು ಪ್ರಕಟಿಸಿದರು.

ನೀರಿನಿಂದ ಮೈದುಂಬಿಕೊಂಡಿರುವ ಮಂಚನಬೆಲೆ ಜಲಾಶಯಕ್ಕೆ ಶುಕ್ರವಾರ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದ ಅವರು, ಬೆಂಗಳೂರು ಜನರಿಗೆ ಈ ಜಲಾಶಯ ಬಹು ಇಷ್ಟದ ಪ್ರವಾಸಿತಾಣವಾಗಿದೆ. ಈ ದೃಷ್ಟಿಯಿಂದ ಸುಮಾರು 150 ಕೋಟಿ ರೂ ವೆಚ್ಚದಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಈ ಯೋಜನೆಯನ್ನು ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದನ್ನು ಕಷ್ಣರಾಜ ಸಾಗರದ ಕೆಳಭಾಗದಲ್ಲಿರುವ ಬೃಂದಾವನದಂತೆಯೇ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಮಂಚನಬೆಲೆ ಜಲಾಶಯ ತುಂಬುತ್ತಿದ್ದಾಗ ಇದುವರೆಗೂ ಶಾಸಕರು, ತಪ್ಪಿದರೆ ಹಿರಿಯ ಅಧಿಕಾರಿಗಳು ಬಾಗಿನ ಅರ್ಪಿಸುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಮಟ್ಟದ ನಾಯಕರೊಬ್ಬರು ಜಲಾಶಯಕ್ಕೆ ಬಾಗಿನ ಅರ್ಪಿಸಿದರು.

ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಡಾ. ಅಶ್ವತ್ಥನಾರಾಯಣ ಅವರು, ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಅತ್ಯಂತ ಸುಂದರವಾದ, ಈ ಭಾಗದ ಜೀವನಾಡಿಯಾದ ಜಲಾಶಯಕ್ಕೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದ್ದು ನನ್ನ ಪಾಲಿನ ಅದೃಷ್ಟವಾಗಿದೆ ಎಂದರು.

ಇದೇ ವೇಳೆ ಡಿಸಿಎಂ ಅವರು ತಮ್ಮ ಜತೆಯಲ್ಲಿಯೇ ಇದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌, ತೋಟಗಾರಿಕೆ ಸಚಿವ ನಾರಾಯಣ ಗೌಡ, ಸಂಸದ ಡಿ.ಕೆ. ಸುರೇಶ್, ಶಾಸಕ‌ ಮಂಜುನಾಥ್‌, ಜಿಲ್ಲಾಧಿಕಾರಿ ಅರ್ಚನಾ, ಜಿಪಂ ಸಿಇಒ ಇಕ್ರಂ ಸೇರಿದಂತೆ ಹಲವರು ಭಾಗಿ ಆಗಿದ್ದರು. ಬಾಗಿನ ಸಮರ್ಪಣೆ ಬಳಿಕ ಡಿಸಿಎಂ ಅವರು ಎಲ್ಲರ ಜತೆಗೂಡಿ ಸೇನಾ ಬೋಟ್ನಲ್ಲಿ ಜಲ ವಿಹಾರ ನಡೆಸಿದರು.

ಮಂಚನಬೆಲೆ ಜಲಾಶಯವು ಮೊದಲಿನಿಂದಲೂ ಬೆಂಗಳೂರು ಜನರಿಗೆ ಬಹಳ ಇಷ್ಟದ ತಾಣ. ವೀಕೆಂಡ್‌ ವೇಳೆಯಲ್ಲಿ ಅಪಾರ ಸಂಖ್ಯೆಯಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಹೀಗಾಗಿ ಈ ಜಾಗವನ್ನು ರಾಜ್ಯದ ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದ ಡಿಸಿಎಂ, ಪ್ರವಾಸಿ ತಾಣಗಳು ಹೆಚ್ಚಿದಂತೆಲ್ಲ ಜಿಲ್ಲೆಯ ಅಭಿವೃದ್ಧಿಗೂ ಹೆಚ್ಚು ವೇಗ ಬರಲಿದೆ ಎಂದು ಹೇಳಿದರು.

Facebook Comments

Sri Raghav

Admin