ಜೆಡಿಎಸ್ ಜೊತೆ ಮೈತ್ರಿ ಸುದ್ದಿ ಕುರಿತು ಯಡಿಯೂರಪ್ಪ ಹೇಳಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.12-ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ. ಭಿನ್ನಮತೀಯ ಶಾಸಕರಲ್ಲಿ ಗೊಂದಲ ಸೃಷ್ಟಿಸಲು ಕೆಲವರು ಇಂತಹ ಕುತಂತ್ರ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.

ಈ ಹಿಂದೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಪ್ಪ-ಮಕ್ಕಳು ನಮಗೆ ಏನು ಮಾಡಿದ್ದಾರೆ ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಭಿನ್ನಮತೀಯರಲ್ಲಿ ಗೊಂದಲ ಸೃಷ್ಟಿಸಲು ಕೆಲವರು ಷಡ್ಯಂತ್ರ ನಡೆಸಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ತಿಳಿಸಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‍ರಾವ್, ಪಕ್ಷದ ಮುಖಂಡ ಕೆ.ಎಸ್.ಈಶ್ವರಪ್ಪ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಭೇಟಿಯಾಗಿರುವುದು ಆಕಸ್ಮಿಕ. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಈಗಾಗಲೇ ಮುರಳೀಧರ್ ರಾವ್ ಸೇರಿದಂತೆ ಎಲ್ಲರೂ ಭೇಟಿಗೆ ಸ್ಪಷ್ಟನೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ ಯಾವುದೇ ಸಂದರ್ಭದಲ್ಲೂ ಬಿದ್ದು ಹೋಗಬಹುದು. ಇಂತಹ ಸಂದರ್ಭದಲ್ಲಿ ನಾವು ಅವರ ಜೊತೆ ಕೈ ಜೋಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಅಪ್ಪ-ಮಕ್ಕಳು ನಿಸ್ಸೀಮರು:
ಶಾಸಕ ರೇಣುಕಾಚಾರ್ಯ ಮಾತನಾಡಿ, ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ಅಪ್ಪ-ಮಕ್ಕಳು ನಿಸ್ಸೀಮರು. ಅತೃಪ್ತರು ಅಸಮಾಧಾನಗೊಂಡು ಹೊರಬರಲಿ ಎಂಬುದು ಅವರ ಉದ್ದೇಶ.  ಹಿಂದೆ 20-20 ಸರ್ಕಾರ ರಚನೆ ಮಾಡಿದಾಗ ಜೆಡಿಎಸ್ ಹಾಗೂ ಅಪ್ಪ-ಮಕ್ಕಳು ಯಾವ ರೀತಿ ನಡೆದುಕೊಂಡರು ಎಂಬುದು ಎಲ್ಲರಿಗೂ ಗೊತ್ತು. ಕೆಲವು ಶಾಸಕರಿಗೆ ಜೆಡಿಎಸ್ ಬೆದರಿಕೆ ಹಾಕುವ ಪ್ರಯತ್ನ ಮಾಡುತ್ತಿದೆ. ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿದರು.

ಯಾವುದೇ ಸಂದರ್ಭದಲ್ಲೂ ಸರ್ಕಾರ ಪತನವಾಗಬಹುದು. ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿದ್ದು, ಸರ್ಕಾರ ರಚನೆ ಮಾಡುವ ಅವಕಾಶವನ್ನು ಮುಕ್ತವಾಗಿ ಇಟ್ಟುಕೊಂಡಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಲಿದೆ ಎಂದು ಭವಿಷ್ಯ ನುಡಿದರು.

ನಿನ್ನೆ ರಾತ್ರಿ ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ವಿ.ಮುರಳೀಧರ್ ರಾವ್, ಕೆ.ಎಸ್.ಈಶ್ವರಪ್ಪ ಹಾಗೂ ಸಾ.ರಾ.ಮಹೇಶ್ ಭೇಟಿ ರಾಜ್ಯ ರಾಜಕಾರಣದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿತ್ತು. ಈ ಬೆಳವಣಿಗೆ ಜೆಡಿಎಸ್-ಬಿಜೆಪಿ ಮೈತ್ರಿಗೆ ವೇದಿಕೆಯಾಗಲಿದೆ ಎಂಬ ಮಾತು ವದಂತಿಗಳು ಹಬ್ಬಿದ್ದವು.

Facebook Comments

Sri Raghav

Admin