ಯಾದಗಿರಿ ಜಿಲ್ಲಾಸ್ಪತ್ರೆ ಅವ್ಯವಸ್ಥೆ ಕಂಡು ಬಿಎಸ್‍ವೈ ಕೆಂಡಾಮಂಡಲ

ಈ ಸುದ್ದಿಯನ್ನು ಶೇರ್ ಮಾಡಿ

ಯಾದಗಿರಿ, ಜೂ 9- ಬರ ಅಧ್ಯಯನ ಪ್ರವಾಸದಲ್ಲಿರುವ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಇಂದು ಯಾದಗಿರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಳ್ಳಂಬೆಳಗ್ಗೆ ಜಿಲ್ಲಾಸ್ಪತ್ರೆಗೆ ಯಡಿಯೂರಪ್ಪ ಮತ್ತಿತರ ಸ್ಥಳೀಯ ನಾಯಕರು ಭೇಟಿ ನೀಡಿದಾಗ ಆಸ್ಪತ್ರೆಯ ಆವರಣದಲ್ಲಿದ್ದ ಕಸ ಮತ್ತು ತ್ಯಾಜ್ಯಗಳು, ಸ್ವಚ್ಛತೆ ಕಾಣದ ವಾರ್ಡ್‍ಗಳು, ಬೀಗ ಹಾಕಿದ್ದ ಡಯಾಲಿಸಿಸ್ ಕೇಂದ್ರ ಇನ್ನಿತರ ಅವ್ಯವಸ್ಥೆ ಕಂಡು ಆರೋಗ್ಯಾಧಿಕಾರಿಗಳ ವಿರುದ್ಧ ಹರಿಹಾಯ್ದರು.

ಬಡಜನರಿಗಾಗಿ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರು ಸಮರ್ಪಕವಾಗಿ ನಿರ್ವಹಿಸದ ಅಧಿಕಾರಿಗಳು, ಸರಿಯಾಗಿ ಮೇಲುಸ್ತುವಾರಿ ನೋಡಿಕೊಳ್ಳದ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆಯ ಒಳಭಾಗದಲ್ಲಿ ಸಂಚರಿಸುವಾಗ ಯಡಿಯೂರಪ್ಪ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ನಿನ್ನೆಯಷ್ಟೇ ಕೊಪ್ಪಳ, ಬಾದಾಮಿ ಮುಂತಾದೆಡೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದ ಯಡಿಯೂರಪ್ಪನವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಇದ್ದರೂ ಮೈತ್ರಿ ಸರ್ಕಾರ ಕಚ್ಚಾಟದಲ್ಲಿ ತೊಡಗಿದೆ. ಈ ಸರ್ಕಾರಕ್ಕೆ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ಕಾಳಜಿ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಉದ್ಯೋಗವಿಲ್ಲದೆ ಜನ ಗುಳೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿ ಇದ್ದರೂ ಸರ್ಕಾರ ಮಾತ್ರ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಇಂದು ಯಾದಗಿರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೂಡ ಅವರಿಗೆ ಇಂತಹುದೇ ಪರಿಸ್ಥಿತಿ ಎದುರಾಯಿತು.

ಯಾದಗಿರಿ ಜಿಲ್ಲೆಯ ಹಲವೆಡೆ ಪ್ರವಾಸ ನಡೆಸಿದ ಯಡಿಯೂರಪ್ಪ ಸಾರ್ವಜನಿಕರ ಸಮಸ್ಯೆಗಳನ್ನು, ಕುಂದು ಕೊರತೆಗಳನ್ನು ಆಲಿಸಲಿದ್ದಾರೆ. ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿ ಜನರಿಗೆ ಸ್ಪಂದಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ