ಗುರುವಾರದವರೆಗೂ ಶಾಸಕರ ‘ವಿಶ್ವಾಸ’ ಉಳಿಸಿಕೊಳ್ಳಲು ಬಿಎಸ್‍ವೈ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.16- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ವಿಶ್ವಾಸ ಮತಯಾಚನೆಯಲ್ಲಿ ಸೋಲಾಗಿ ಸರ್ಕಾರ ರಚನೆ ಮಾಡುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಸರತ್ತು ನಡೆಸಿದ್ದಾರೆ.

ಪ್ರಸ್ತುತ ಯಲಹಂಕ ಸಮೀಪದ ರಮಡ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿರುವ 105 ಶಾಸಕರು ಹಾಗೂ ಕೆಲವು ಪಕ್ಷದ ಪ್ರಮುಖರ ಜೊತೆ ಕಳೆದ ರಾತ್ರಿ ಅಲ್ಲೇ ತಂಗಿದ್ದ ಅವರು, ಶಾಸಕರು ಆತ್ಮವಿಶ್ವಾಸ ಕಳೆದುಕೊಳ್ಳುವುದು ಹಾಗೂ ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗದಂತೆ ಹಿತೋಪದೇಶ ಮಾಡಿದ್ದಾರೆ.

ಎಲ್ಲ ಶಾಸಕರ ಜೊತೆ ಮುಕ್ತವಾಗಿ ಮಾತನಾಡಿದ ಯಡಿಯೂರಪ್ಪ , ಈ ಬಾರಿ ನಮ್ಮ ಲೆಕ್ಕಾಚಾರವೇ ಮೇಲುಗೈ ಸಾಧಿಸಲಿದೆ. ಎಷ್ಟೇ ಪ್ರಯತ್ನಿಸಿದರೂ ದೋಸ್ತಿ ಪಕ್ಷಗಳು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡಲು ಸಾಧ್ಯವಿಲ್ಲ. ಅವರಿಗೆ ಸೋಲುಂಟಾಗಿ ನಾವು ಸರ್ಕಾರ ರಚನೆ ಮಾಡುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಶಾಸಕರಿಗ ಧೈರ್ಯ ತುಂಬಿದ್ದಾರೆ.

ಎಲ್ಲ ಶಾಸಕರೊಂದಿಗೆ ಊಟ ಸೇವಿಸಿದ ಯಡಿಯೂರಪ್ಪ ಗುರುವಾರ ಸರ್ಕಾರ ಪತನವಾದರೆ ಒಂದೂ ಕ್ಷಣವೂ ವಿಳಂಬ ಮಾಡದೆ ತಕ್ಷಣವೇ ಸರ್ಕಾರ ರಚನೆಗೆ ಹಕ್ಕು ಮಂಡಿಸಬೇಕು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡುವ ಸಂದರ್ಭದಲ್ಲಿ ನಮಗೆ ಅತ್ಯಂತ ನಿರ್ಣಾಯಕ ದಿನ. ಅಂದು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕೆಂದು ಸಲಹೆ ಮಾಡಿದ್ದಾರೆ.

ನಾವು ಯಾವುದೇ ಶಾಸಕರನ್ನು ಆಮಿಷಕ್ಕೆ ಒಳಪಡಿಸಿ ರಾಜೀನಾಮೆ ನೀಡುವಂತೆ ಒತ್ತಾಯ ಮಾಡಿಲ್ಲ. ಕೆಲವರು ವೈಯಕ್ತಿಕ ಕಾರಣಗಳಿಗಾಗಿ ಸ್ವಯಂಪ್ರೇರಿತರಾಗಿ ರಾಜೀನಾಮೆ ಕೊಟ್ಟಿದ್ದಾರೆ. ದೋಸ್ತಿ ಪಕ್ಷಗಳ ಮುಖಂಡರು ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುವುದು ಸರಿಯಲ್ಲ. ಇದಕ್ಕೆ ನೀವು ತಲೆಕೆಡಿಸಿಕೊಳ್ಳಬಾರದೆಂದು ಬಿಎಸ್‍ವೈ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ನಾವು ನಿರೀಕ್ಷೆ ಮಾಡಿದವರು ಕೂಡ ರಾಜೀನಾಮೆ ಕೊಟ್ಟಿದ್ದಾರೆ. ಶಾಸಕರನ್ನು ಮುಖ್ಯಮಂತ್ರಿ ಹಾಗೂ ಇತರರು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ. ಅವರ ಮನೆಯನ್ನು ಭದ್ರಪಡಿಸಿಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ತಾಳ್ಮೆಯಿಂದ ಒಪ್ಪಿಸಿ:  ಗುರುವಾರ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಆಡಳಿತ ಪಕ್ಷದವರು ಅನಗತ್ಯವಾಗಿ ನಮ್ಮನ್ನು ಪ್ರಚೋದನೆಗೊಳಿಸುತ್ತಾರೆ. ಆಪರೇಷನ್ ಕಮಲ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಮತ್ತಿತರರ ಮೇಲೆ ಆರೋಪ ಮಾಡುತ್ತಾರೆ. ಈ ಸಂದರ್ಭದಲ್ಲಿ ಎಲ್ಲ ಶಾಸಕರು ತಾಳ್ಮೆಯಿಂದ ವರ್ತಿಸಬೇಕೆಂದು ಸಲಹೆ ಕೊಟ್ಟಿದ್ದಾರೆ.

ನಿಮ್ಮನ್ನು ಉದ್ದೇಶಪೂರ್ವಕವಾಗಿಯೇ ಟೀಕೆ ಮಾಡುತ್ತಾರೆ. ಯಾವುದೇ ಕಾರಣಕ್ಕೂ ನೀವು ಉದ್ವೇಗಕ್ಕೆ ಒಳಗಾಗಬಾರದು. ವಿಶ್ವಾಸ ಮತಯಾಚನೆ ಮುಗಿಯುವವರೆಗೂ ಸಹನೆಯಿಂದ ಇದ್ದು ನಮ್ಮ ಕಾರ್ಯ ಯಶಸ್ವಿಯಾಗುವವರೆಗೂ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿದ್ದಾರೆ.

ಇನ್ನು ಯಡಿಯೂರಪ್ಪ ಶಾಸಕರಿಗೆ ಸರ್ಕಾರ ರಚನೆಯಾದ ತಕ್ಷಣವೇ ನಿಮ್ಮ ಕ್ಷೇತ್ರದ ಕೆಲಸಕಾರ್ಯಗಳು, ಕಾಮಗಾರಿಗಳು ಸೇರಿದಂತೆ ಯಾವ ಯಾವ ಸಮಸ್ಯೆಗಳಿವೆಯೋ ಅದರ ಬಗ್ಗೆ ಪಟ್ಟಿಯನ್ನು ಸಿದ್ದಪಡಿಸಿ.

ಹಿಂದೆ ನಮ್ಮಿಂದ ತಪ್ಪಾಗಿದ್ದರೂ ಅದನ್ನು ಸರಿಪಡಿಸಿಕೊಂಡು ಹೋಗೋಣ. ಈ ಬಾರಿ ರಾಜ್ಯದ ಜನತೆಯ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸೋಣ. ಇದಕ್ಕೆ ನಿಮ್ಮ ಸಹಕಾರ ಅಗತ್ಯ ಎಂದು ಯಡಿಯೂರಪ್ಪ ತಿಳಿಸಿಕೊಟ್ಟಿದ್ದಾರೆ .

Facebook Comments