ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಹೊಸ ಕೈಗಾರಿಕಾ ನೀತಿಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.19- ರಾಜ್ಯದಲ್ಲೇ ನೂತನವಾಗಿ ಜಾರಿಯಾಗಲಿರುವ ಹೊಸ ಕೈಗಾರಿಕಾ ನೀತಿಯಲ್ಲಿ ಎಸ್ಸಿ-ಎಸ್ಟಿ ಸಮುದಾಯದವರು ಉದ್ಯಮ ಆರಂಭಿಸಲು ಅನುಕೂಲವಾಗುವಂತೆ ನಿಯಮಗಳನ್ನು ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ದಲಿತ ಉದ್ದಿಮೆದಾರರ ಸಂಘದ ವತಿಯಿಂದ ಆಯೋಜಿಸಿದ್ದ ಸವಲತ್ತುಗಳ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೂತನವಾಗಿ ಜಾರಿ ಮಾಡಲಿರುವ ಕೈಗಾರಿಕಾ ನೀತಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶ ಕಲ್ಪಿಸುವುದು ಹಾಗೂ ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸುವ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೈಗಾರಿಕಾ ನೀತಿಯನ್ನು ರೂಪಿಸಲಾಗುತ್ತದೆ. ಸಮಗ್ರ ಕೈಗಾರಿಕಾ ಅಭಿವೃದ್ಧಿ ಮತ್ತು ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು ಇದರ ಮೂಲ ಉದ್ದೇಶ ಎಂದು ಹೇಳಿದರು.

ರಾಜ್ಯದಲ್ಲಿ ದಲಿತರು ಸೇರಿದಂತೆ ಎಲ್ಲಾ ಸಮುದಾಯಗಳು ನೆಮ್ಮದಿಯಿಂದ ಕೆಲಸ ಮಾಡುವಂತಹ ವಾತಾವರಣವನ್ನು ನಿರ್ಮಾಣ ಮಾಡುತ್ತೇವೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಯಡಿಯೂರಪ್ಪ ಅಭಯ ನೀಡಿದರು. ಎಸ್ಸಿ-ಎಸ್ಟಿ ಸಮುದಾಯದವರು ಸ್ವಾವಲಂಬಿಗಳಾಗಿ ಉದ್ಯಮ ನಡೆಸಲು ಯಾವ ಯಾವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬುದನ್ನು ನಾನು ಮತ್ತು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರ ಜತೆ ಕುರಿತು ಚರ್ಚೆ ಮಾಡಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಯಾವುದು ಸಾಧ್ಯವಿದೆಯೋ ಅದನ್ನು ಜಾರಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ವಾಗ್ದಾನ ಮಾಡಿದರು.

ಎಸ್ಸಿ-ಎಸ್ಟಿ ಸಮುದಾಯಕ್ಕೆ ವಿವಿಧ ಇಲಾಖೆಯಡಿ ಕಾರ್ಯಕ್ರಮಗಳನ್ನು ರೂಪಿಸಲು 30,400ಕೋಟಿ ಕ್ರಿಯಾ ಯೋಜನೆಯನ್ನು ರೂಪಿಸಿದ್ದೇವೆ. ಪ್ರತಿಯೊಬ್ಬರೂ ನೆಮ್ಮದಿಯಿಂದ ಹಾಗೂ ಸ್ವಾಭಿಮಾನದಿಂದ ಜೀವನ ನಡೆಸಬೇಕು. ಆ ದೃಷ್ಟಿಯಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತದೆ. ನಿಮ್ಮ ಮನಸ್ಸಿನಲ್ಲಿ ಸಣ್ಣ ಸಂಶಯಗಳಿಗೂ ಎಡೆಮಾಡಿಕೊಡದಂತೆ ಕೆಲಸ ಮಾಡುತ್ತೇವೆ ಎಂದು ಪುರುಚ್ಚರಿಸಿದರು.

ಎಸ್ಸಿ-ಎಸ್ಟಿ ಸಮುದಾಯಗಳ ಆರ್ಥಿಕ ಅಭಿವೃದ್ಧಿ ಕಾರ್ಯದರ್ಶಿ ಶ್ರೀನಿವಾಸ್ ಅವರು ಈ ಸಮುದಾಯದ ನೌಕರರ ಸಮಸ್ಯೆಗಳ ಬಗ್ಗೆ ನನ್ನ ಗಮನ ಸೆಳೆದಿದ್ದಾರೆ. ನನ್ನ ಇತಿಮಿತಿಯೊಳಗೆ ಎಷ್ಟು ಸಾಧ್ಯವೋ ಅಷ್ಟನ್ನು ಈಡೇರಿಸುತ್ತೇವೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕನಸು ಏನಿತ್ತೋ ಅದನ್ನು ನನಸು ಮಾಡುವುದು ನಮ್ಮ ಸರ್ಕಾರದ ಮೂಲ ಉದ್ದೇಶ ಎಂದರು.
ಸಮ ಸಮಾಜ ನಿರ್ಮಾಣ ವಾಗಬೇಕು ಎಂಬುದು ಅಂಬೇಡ್ಕರ್ ಅವರ ಕನಸಾಗಿತ್ತು.

ಇದನ್ನು ನನಸು ಮಾಡುವ ನಿಟ್ಟಿನಲ್ಲಿ ಈ ಸಮುದಾಯಕ್ಕೆ ಅನುಕೂಲವಾಗಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಯಡಿಯೂರಪ್ಪನವರು ಭಾಷಣ ಮಾಡುತ್ತಿದ್ದ ವೇಳೆ ಸಭೀಕರು ರಾಜ್ಯದ ವಿವಿಧೆಡೆ ದಲಿತರ ಮೇಲೆ ಹಲ್ಲೆ, ದೌರ್ಜನ್ಯದಂತ ಅಮಾನುಷ ಕೃತ್ಯಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಬೇಕೆಂದು ಮುಖ್ಯಮಂತ್ರಿಗಳ ಮೊರೆ ಹೋದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ದಲಿತ ಉದ್ಯಮಿಗಳು ಕೈಗಾರಿಕೆ ಆರಂಭಿಸಲು ಜಮೀನು ಖರೀದಿಸಲು ನಮ್ಮ ಸರ್ಕಾರ ಶೇ.50ರಷ್ಟು ಸಬ್ಸಿಡಿ ಕೊಡುತ್ತಿತ್ತು. ಇದನ್ನು ಶೇ.75ಕ್ಕೆ ಹೇರಿಕೆ ಮಾಡಬೇಕೆಂದು ಯಡಿಯೂರಪ್ಪನವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಈ ವೇದಿಕೆಯಲ್ಲೇ ಈಡೇರಿಸುವ ವಾಗ್ದಾನ ಮಾಡಿದರು.

ಎಸ್ಸಿ-ಎಸ್ಟಿ ಸಮುದಾಯದವರು ಉದ್ಯಮ ಆರಂಭಿಸಲು ಜಮೀನು ಖರೀದಿಗೆ ಈಗಿರುವ ಕಾಯ್ದೆಗೆ ತಿದ್ದುಪಡಿ ಮಾಡಿ ಶೇ.75ರಷ್ಟು ಸಬ್ಸಿಡಿ ನೀಡಬೇಕು. ಇದು ನನ್ನೊಬ್ಬನ ಒತ್ತಾಯವಲ್ಲ. ಇಡೀ ಎಸ್ಸಿ-ಎಸ್ಟಿ ಸಮುದಾಯದವರ ಒತ್ತಾಯವಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ದನಿಗೂಡಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.

ನಾನು ಈಗ ವಿರೋಧ ಪಕ್ಷದ ಸ್ಥಾನದಲ್ಲಿದ್ದೇನೆ. ಅವರ ಪರವಾಗಿ ಸರ್ಕಾರದ ಗಮನ ಸೆಳೆಯುವುದು ನನ್ನ ಕರ್ತವ್ಯ. ಸಮಾಜದಲ್ಲಿ ಯಾರು ಸಂವಿಧಾನದ ಸೌಲತ್ತುಗಳಿಂದ ವಂಚಿತರಾಗಿರುತ್ತಾರೋ ಅವರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದು ಎಲ್ಲಾ ರಾಜಕೀಯ ಪಕ್ಷಗಳ ಕರ್ತವ್ಯವೂ ಹೌದು ಎಂದು ಹೇಳಿದರು.

ಎಸ್ಸಿ-ಎಸ್ಟಿ ಸಮುದಾಯದ ಉದ್ಯಮಿಗಳು ಉದ್ಯಮ ಮಾಡಬೇಕಾದರೆ ಸುಲಭವಾಗಿ ಸಾಲ ಸೌಲತ್ತುಗಳು ಸಿಗಬೇಕು. ಈವರೆಗೂ ಅವರಿಗೆ ಎಫ್‍ಕೆಸಿಸಿಐನಲ್ಲಿ ಮಾತ್ರ ಸಾಲವನ್ನು ನೀಡಲಾಗುತ್ತಿದೆ. ಸಾಧ್ಯವಾದರೆ ಈಗಿರುವ ಕಾಯ್ದೆಗೆ ತಿದ್ದುಪಡಿ ಮಾಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ಕಡ್ಡಾಯವಾಗಿ ಸಾಲ ಕೊಡಲು ನಿಯಮಗಳನ್ನು ರೂಪಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರತಿ ತಿಂಗಳು ಅಧಿಕಾರಿಗಳ ಸಭೆ ಕರೆದು ಎಸ್ಸಿ-ಎಸ್ಟಿ ಸಮುದಾಯಕ್ಕೆ ಬಜೆಟ್‍ನಲ್ಲಿ ಮೀಸಲಿಟ್ಟಿರುವ ಅನುದಾನ ಎಷ್ಟು ಖರ್ಚಾಗಿದೆ ಎಂಬುದರ ಬಗ್ಗೆ ಪರಿಶೀಲಿಸುತ್ತಿದ್ದೆ. ಈಗಿನ ಸರ್ಕಾರವೂ ಅದನ್ನೇ ಮಾಡಬೇಕು. ಶೋಷಿತ ವರ್ಗದವರಿಗೆ ಕೇವಲ ಮತ ಹಾಕುವ ಸ್ವತಂತ್ರ ಇದ್ದರೆ ಸಾಲದು. ರಾಜಕೀಯ ಸ್ವತಂತ್ರವೂ ಇರಬೇಕೆಂದು ಕಿವಿಮಾತು ಹೇಳಿದರು.

ಇನ್ನು ಸಭೆಯಲ್ಲಿ ಸಿದ್ದರಾಮಯ್ಯನವರು ಸಚಿವರಾದ ಜಗದೀಶ್‍ಶೆಟ್ಟರ್, ಗೋವಿಂದ ಕಾರಜೋಳ ಅವರ ಜತೆ ಪ್ರತ್ಯೇಕವಾಗಿ ಮಾತನಾಡಿದ್ದು ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಶಾಸಕ ಎನ್.ಮಹೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Facebook Comments