‘ಉಪಚುನಾವಣೆ ನಂತರ ಸಿದ್ದರಾಮಯ್ಯಗೆ 3 ವರ್ಷ ಪ್ರತಿಪಕ್ಷ ಸ್ಥಾನ ಫಿಕ್ಸ್’

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ನ.26-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ವರ್ಷಗಳ ಕಾಲವೂ ಪ್ರತಿಪಕ್ಷದ ಸ್ಥಾನದಲ್ಲೇ ಇರುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದರು.  ನಗರದಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ನಂತರ ರಾಜ್ಯದಲ್ಲಿ ಯಾವುದೇ  ಚುನಾವಣೆ ನಡೆಯುವುದಿಲ್ಲ.

ಸಿದ್ದರಾಮಯ್ಯ ಹಾಗೆಂದುಕೊಂಡಿದ್ದರೆ ಅದು ಅವರ ಭ್ರಮೆ ಎಂದು ವ್ಯಂಗ್ಯವಾಡಿದರು.  ಸಿದ್ದರಾಮಯ್ಯ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಪದೇ ಪದೇ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಮೂರು ವರ್ಷಗಳ ಕಾಲ ಅವರು ಪ್ರತಿ ಪಕ್ಷದ ಸ್ಥಾನದಲ್ಲೇ ಇರುವುದು ಮಾತ್ರ ಗ್ಯಾರಂಟಿ ಎಂದು ಹೇಳಿದರು.

ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಲಿದೆ ನಾನು ಇದನ್ನು ಕೇವಲ ಪ್ರಚಾರಕ್ಕಾಗಿ ಹೇಳುತ್ತಿಲ್ಲ. ಎಲ್ಲವನ್ನೂ ಅಳೆದು ತೂಗಿ ಹೇಳುತ್ತಿದ್ದೇನೆ ಮೂರು ವರ್ಷಗಳ ಕಾಲ ನಾವು ಅಧಿಕಾರ ನಡೆಸುತ್ತೇವೆ ಎಂದು  ತಿಳಿಸಿದರು.ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪುಟ್ಟಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಹಿಂದೆ ಅವರು ಜೆಡಿಎಸ್‍ನಿಂದ  ಮೂರು ಬಾರಿ  ಆಯ್ಕೆಯಾಗಿದ್ದರು. ಅವರು ಗೆಲ್ಲುವ ವಿಶ್ವಾಸವಿರುವುದರಿಂದ ಅವರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ ಎಂದು ಯಡಿಯೂರಪ್ಪ ಸುದ್ದಿಗಾರರ  ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Facebook Comments