ಬಡ ರೋಗಿಗಳನ್ನು ಅಲೆದಾಡಿಸಿ ನೋಯಿಸಬೇಡಿ : ವೈದ್ಯರಲ್ಲಿ ಕೈ ಮುಗಿದು ವಿನಂತಿಸಿದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.11- ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆ ಕೊಡದೆ ಆದಷ್ಟು ಬೇಗ ಉತ್ತಮ ಚಿಕಿತ್ಸೆ ಕೊಟ್ಟು ಕಳುಹಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೈದ್ಯರಲ್ಲಿ ಕೈ ಮುಗಿದು ಬೇಡಿಕೊಂಡರು. ನಗರದ ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ, ಮಿಂಟೋ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳುಳ್ಳ ಒಳರೋಗಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕೆಲಸದ ಸಮಯದಲ್ಲಿ ರೋಗಿಗಳನ್ನು ನೋಡುವುದನ್ನು ಬಿಟ್ಟು ಹೊರಗಡೆ ಸುತ್ತುವುದು ನಿಮ್ಮ ವೃತ್ತಿಗೆ ಶೋಭೆ ತರುವುದಿಲ್ಲ. ಆಸ್ಪತ್ರೆಗೆ ಬಂದ ರೋಗಿಗಳಿಗೆ ತಕ್ಷಣ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಎಚ್ಚರಿಕೆ ಬೆರೆತ ಸಲಹೆ ನೀಡಿದರು. ಸರ್ಕಾರಿ ಆಸ್ಪತ್ರೆಗೆ ವೈದ್ಯರು ಜನಮೆಚ್ಚುವಂತಹ ಕೆಲಸಗಳನ್ನು ಮಾಡಬೇಕು. ಆಸ್ಪತ್ರೆಗೆ ಬರುವ ರೋಗಿಗಳನ್ನು ಮಾನವೀಯತೆಯಿಂದ ಕಾಣಿರಿ. ನೀವು ಯಾವುದೇ ಆರೋಪಗಳಿಗೆ ಅವಕಾಶ ಕೊಡದೆ ಶ್ರದ್ಧೆಯಿಂದ ಒಳರೋಗಿಗಳಿಗೆ ಚಿಕಿತ್ಸೆ ಕೊಡಿ ಎಂದು ಸೂಚ್ಯವಾಗಿ ಹೇಳಿದರು.

100ಕ್ಕೆ 50 ಜನ ರೋಗಿಗಳಿಗೆ ಒಂದಲ್ಲ ಒಂದು ರೀತಿ ಕಿರುಕುಳ ಆಗುತ್ತಿದೆ ಎಂಬ ಆರೋಪಿಗಳು ಕೇಳಿ ಬಂದಿವೆ. ಅದಕ್ಕೆ ಅವಕಾಶ ನೀಡದೆ ಶ್ರದ್ಧೆಯಿಂದ ನೀವು ಕೆಲಸ ಮಾಡಬೇಕು ಎಂದರು. ಇಂದು ಸರ್ಕಾರಿ ಆಸ್ಪತ್ರೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿಗಳಿಸಿವೆ. ಅದೇ ರೀತಿ ವಿಕ್ಟೋರಿಯಾ ಆಸ್ಪತ್ರೆಯ ಕೀರ್ತಿ ಪತಾಕೆ ಹಾರಿಸಬೇಕೆಂಬುದು ನನ್ನ ಆಶಯವಾಗಿದೆ ಎಂದು ಹೇಳಿದರು.

ಸರ್ಕಾರ ಆಸ್ಪತ್ರೆಗಳಿಗೆ ಅನುದಾನ ಕೊಡುವುದು ಹೆಚ್ಚಲ್ಲ. ಈ ಅನುದಾನ ಸದ್ಬಳಕೆಯಾಗಬೇಕು. ಆ ರೀತಿ ರೋಗಿಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕೆಂದು ಸಿಎಂ ಸಲಹೆ ನೀಡಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳೆಂದರೆ ಮೊದಲು ಜನರು ಮೂಗು ಮುರಿಯುತ್ತಿದ್ದರು. ಸರಿಯಾದ ಚಿಕಿತ್ಸೆ ಸಿಗುವುದಿಲ್ಲ. ಮೂಲಭೂತ ಸೌಕರ್ಯಗಳಿಲ್ಲ.

ಮುಂತಾದ ನೆಪ ಹೇಳಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದರು.ಇಂದು ನಮ್ಮ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಿದೆ. ಕೇವಲ ಕಟ್ಟಡ ಕಟ್ಟಿದರೆ ಸಾಲದು ರೋಗಿಗಳಿಗೆ ಬೇಕಾದ ಹಾಸಿಗೆ, ಶೌಚಾಲಯ, ಔಷಧೋಪಚಾರಗಳು, ಶುದ್ಧ ಕುಡಿಯುವ ನೀರು, ಊಟದ ವ್ಯವಸ್ಥೆ ಎಲ್ಲದಕ್ಕೂ ಆದ್ಯತೆ ನೀಡಿದ್ದೇವೆ. ಖಾಸಗಿ ಆಸ್ಪತ್ರೆಗಳಿಗೆ ಸ್ಪರ್ಧೆ ಒಡ್ಡುವಂತಹ ಚಿಕಿತ್ಸೆ ನೀಡಬೇಕು. ಇದು ವೈದ್ಯರ ಮೇಲಿದೆ ಎಂದು ತಿಳಿಸಿದರು.

ರೋಗಿಗಳು ವೈದ್ಯರೆಂದರೆ ದೇವರೆಂದು ಭಾವಿಸಿದ್ದಾರೆ. ನೀವು ಅದೇ ರೀತಿ ನಡೆದುಕೊಳ್ಳಬೇಕು. ಅನುದಾನ ನೀಡುವ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳಬೇಡಿ. ನಮ್ಮ ಸರ್ಕಾರ ನಿಮಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ. ಸರ್ಕಾರಿ ಆಸ್ಪತ್ರೆಗಳು ಉತ್ತಮ ಚಿಕಿತ್ಸೆ ನೀಡುವಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬಾರದು ಎಂದು ಅಶ್ವಥನಾರಾಯಣ ತಿಳಿಸಿದರು.

ನಿರ್ಗಮಿಸಿದ ಜಮೀರ್: ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂದು ಸ್ಥಳೀಯ ಶಾಸಕ ಜಮೀರ್ ಅಹಮ್ಮದ್ ಕಾರ್ಯಕ್ರಮದಿಂದ ಅರ್ಧಕ್ಕೆ ಹೊರಟು ಬಿಟ್ಟರು.ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆ ತಮ್ಮ ಹೆಸರನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಗಿದೆ ಎಂದು ಅವರು ಕಾರ್ಯಕ್ರಮದಿಂದ ಹೊರ ನಡೆದರು.

ಇದಕ್ಕೂ ಮುನ್ನ ಶಂಕುಸ್ಥಾಪನೆ ನೆರವೇರಿಸುವ ವೇಳೆ ಜಮೀರ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಶಾಸಕ ಉದಯಗರುಡಾಚಾರ್ ಮತ್ತಿತರರು ಉಪಸ್ಥಿತರಿದ್ದರು.

Facebook Comments