ರಾಜ್ಯದಲ್ಲಿ ಇನ್ನಷ್ಟು ವಿನಾಯಿತಿ ಬಗ್ಗೆ ಪ್ರಧಾನಿಗೆ ಸಿಎಂ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.16- ಲಾಕ್‍ಡೌನ್ ಜಾರಿಯಾದ ವೇಳೆ ವಿಧಿಸಲಾಗಿದ್ದ ನಿಬಂಧನೆಗಳನ್ನು ತೆಗೆದುಹಾಕುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿಗೆ ನಾಳೆ ಮನವಿ ಮಾಡಲಿದ್ದು, ಇನ್ನಷ್ಟು ಚಟುವಟಿಕೆಗಳು ಆರಂಭಗೊಳ್ಳುವ ನಿರೀಕ್ಷೆ ಇದೆ.

ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಅನ್‍ಲಾಕ್‍ಡೌನ್ ಕುರಿತಂತೆ ಸಿಎಂ ಬಿಎಸ್‍ವೈ ಅವರ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ.

ಈ ವೇಳೆ ಅವರು ರಾಜ್ಯದಲ್ಲಿ ಲಾಕ್‍ಡೌನ್ ಇನ್ನಷ್ಟು ಸಡಿಲೀಕರಣ ಮಾಡುವಂತೆ ಕೋರಲಿದ್ದಾರೆ. ಈಗಾಗಲೇ ಬಹುತೇಕ ಚಟುವಟಿಕೆಗಳು ರಾಜ್ಯದಲ್ಲಿ ಆರಂಭವಾಗಿದ್ದು, ಉಳಿದಿರುವ ಮೆಟ್ರೋ ರೈಲು ಸಂಚಾರ, ಚಿತ್ರಮಂದಿರಗಳು, ಜಿಮ್ ಕೇಂದ್ರಗಳು, ಕ್ಲಬ್‍ಗಳು ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ಪುನರಾರಂಭಿಸಲು ಅವಕಾಶ ನೀಡಬೇಕೆಂಬ ಬೇಡಿಕೆ ಇಡಲಿದ್ದಾರೆ.

ಈ ಬಗ್ಗೆ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಸುಳಿವು ನೀಡಿದ್ದ ಅವರು ಕರ್ನಾಟಕದಲ್ಲಿ ಪುನಃ ಲಾಕ್‍ಡೌನ್ ಜಾರಿಮಾಡುವ ಪ್ರಶ್ನೆಯೇ ಇಲ್ಲ. ನಾವು ಇನ್ನಷ್ಟು ಸಡಿಲೀಕರಣ ಮಾಡುವಂತೆ ಕೋರುವುದಾಗಿ ಮುನ್ಸೂಚನೆ ನೀಡಿದ್ದರು.  ಕಳೆದ ಮಾರ್ಚ್‍ನಿಂದಲೇ ಮುಚ್ಚಿರುವ ನರ್ಸರಿಯಿಂದ ಹಿಡಿದು ವಿವಿ ವರೆಗಿನ ಶಿಕ್ಷಣ ಸಂಸ್ಥೆಗಳನ್ನು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಕೆಲವು ನಿಬಂಧನೆಗಳೊಂದಿಗೆ ತೆರೆಯಲು ಮನವಿ ಮಾಡುವ ಸಂಭವವಿದೆ.

ರಾಜ್ಯದಲ್ಲಿ ಜೂನ್ 1ರಿಂದಲೇ ಶೈಕ್ಷಣಿಕ ಅವಧಿ ಆರಂಭವಾಗಬೇಕಿತ್ತು. ಕೊರೊನಾ ಬಂದ ಪರಿಣಾಮ ಲಾಕ್‍ಡೌನ್ ಜಾರಿಗೊಳಿಸಿದ್ದರಿಂದ ಶಿಕ್ಷಣ ಸಂಸ್ಥೆಗಳು ಮುಚ್ಚಿಹೋಗಿವೆ. 1 ರಿಂದ 9ನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಉತ್ತೀರ್ಣಗೊಳಿಸಲಾಗಿದೆ. ಇದೇ ರೀತಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಹಲವು ರೀತಿಯ ನಿರ್ಬಂಧಗಳನ್ನು ವಿಧಿಸಿ ನಡೆಸಲು ಉದ್ದೇಶಿಸಲಾಗಿದೆ.

ಸದ್ಯ 1 ರಿಂದ 5ನೆ ತರಗತಿವರೆಗೆ ಆನ್‍ಲೈನ್ ತರಗತಿಗಳನ್ನು ನಡೆಸದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ಕೊಡಲಾಗಿದೆ. ಶಾಲಾ-ಕಾಲೇಜುಗಳು ಆರಂಭವಾಗದ ಕಾರಣ ಪೋಷಕರು ಮತ್ತು ಮಕ್ಕಳು ಚಿಂತಾಕ್ರಾಂತರಾಗಿದ್ದಾರೆ.  ಆಗಸ್ಟ್ ತಿಂಗಳ ಮೊದಲ ವಾರದಿಂದ ಪಾಳಿ ಪದ್ಧತಿಯಲ್ಲಿ ಶಾಲಾ-ಕಾಲೇಜುಗಳನ್ನು ಪುನರಾರಂಭಿಸಲು ಅವಕಾಶ ಕೊಡಬೇಕು.

ಇಲ್ಲಿಯೂ ಕೂಡ ನಿಯಮಗಳನ್ನು ಜಾರಿ ಮಾಡಲಾಗುವುದು. ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು, ಒಂದು ಡೆಸ್ಕ್‍ಗೆ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸುವುದು, ಸಾಮಾಜಿಕ ಅಂತರ , ಸ್ಯಾನಿಟೈಜರ್ ಬಳಕೆ, ಥರ್ಮಲ್ ಪರೀಕ್ಷೆ ಸೇರಿದಂತೆ ಎಲ್ಲ ನಿಯಮಗಳನ್ನೂ ಪಾಲನೆ ಮಾಡಲಿದ್ದೇವೆ ಎಂದು ತಿಳಿಸಲಿದ್ದಾರೆ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡು ಸರಿಸುಮಾರು ಎರಡೂವರೆ ತಿಂಗಳಾಗಿದೆ. ಕನಿಷ್ಟಪಕ್ಷ ದಿನಕ್ಕೆ 8 ರಿಂದ 10 ಲಕ್ಷ ಜನ ಸಂಚಾರ ಮಾಡುತ್ತಿದ್ದರು. ಮಧ್ಯಮ ವರ್ಗದವರು, ಸರ್ಕಾರಿ ಹಾಗೂ ಖಾಸಗಿ ನೌಕರರು ಮೆಟ್ರೋ ಅವಲಂಬಿತರಾಗಿದ್ದರು. ಇಲ್ಲಿಯೂ ಕೂಡ ಯಥಾರೀತಿ ನಿಬಂಧನೆಗಳನ್ನು ವಿಧಿಸುತ್ತೇವೆ. ಹೀಗಾಗಿ ಮೆಟ್ರೋ ರೈಲು ಸಂಚಾರಕ್ಕೂ ಅನುವು ಮಾಡಿಕೊಡುವಂತೆ ಪಿಎಂಗೆ ಸಿಎಂ ಮನವಿ ಮಾಡುವರೆಂದು ತಿಳಿದುಬಂದಿದೆ.

ಉಳಿದಂತೆ ಚಲನಚಿತ್ರ ಮಂದಿರಗಳು, ಜಿಮ್, ಕ್ರೀಡಾ ತರಬೇತಿ ಕೇಂದ್ರಗಳು, ಟ್ಯುಟೋರಿಯಲ್ ಸೇರಿದಂತೆ ಇತರ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಬೇಕೆಂಬ ಬೇಡಿಕೆ ಸಲ್ಲಿಕೆಯಾಗಲಿದೆ. ರಾಜ್ಯದಲ್ಲಿ ಪ್ರತಿದಿನ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಕೂಡ ಅದಕ್ಕಿಂತ ಹೆಚ್ಚಿದೆ.

ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ದೆಹಲಿ, ರಾಜಸ್ಥಾನ ಮತ್ತಿತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈಗಲೂ ಕೊರೊನಾ ನಿಯಂತ್ರಣದಲ್ಲಿದೆ. ಮಹಾರಾಷ್ಟ್ರ ಸೇರಿದಂತೆ ಮತ್ತಿತರ ರಾಜ್ಯಗಳಿಂದ ಬಂದವರಿಂದಾಗಿ ಸೋಂಕಿನ ಪ್ರಮಾಣ ಹೆಚ್ಚಳವಾಗಿದೆ. ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಇದರ ಪ್ರಮಾಣ ಅತ್ಯಂತ ಸಣ್ಣ ಪ್ರಮಾಣದಲ್ಲಿದೆ.

ಮರಣ ಹೊಂದಿದವರು, ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಮುಚ್ಚಿರುವ ಚಟುವಟಿಕೆಗಳನ್ನು ಪುನರಾರಂಭಿಸಬೇಕೆಂಬ ಕೋರಿಕೆ ಮಾಡಲಿದ್ದಾರೆ.  ಮುಖ್ಯಮಂತ್ರಿಯವರ ಬೇಡಿಕೆಗೆ ಪ್ರಧಾನಿ ಅಸ್ತು ಎನ್ನುವರೇ ಎಂಬ ಕುತೂಹಲ ಎಲ್ಲರಲ್ಲಿದೆ.

Facebook Comments