ಶಕ್ತಿಕೇಂದ್ರವಾಯ್ತು ಯಡಿಯೂರಪ್ಪ ನಿವಾಸ, ಬಿಜೆಪಿಯಲ್ಲಿ ಬಿಎಸ್‍ವೈ ಇನ್ನೂ ರಾಜಾಹುಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.28- ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಿ ಮಾಜಿಯಾದರೂ ಬಿ.ಎಸ್.ಯಡಿಯೂರಪ್ಪ ತಮ್ಮ ವರ್ಚಸ್ಸು ಕಳೆದುಕೊಳ್ಳದೆ ರಾಜ್ಯದ ಮತ್ತೊಂದು ಶಕ್ತಿ ಕೇಂದ್ರವಾಗಿ ಬದಲಾಗಿದ್ದಾರೆ. ಕಳೆದ ಒಂದು ವಾರದಿಂದ ತೀವ್ರ ಕುತೂಹಲ ಕೆರಳಿಸಿದ್ದ ಹಲವಾರು ವಿಷಯಗಳಿಗೆ ಯಡಿಯೂರಪ್ಪ ಅವರು ಖುದ್ದು ಉತ್ತರ ನೀಡಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಚರ್ಚೆಗಳು ನಡೆದಾಗ ಯಾರಿಂದಲೂ ಸ್ಪಷ್ಟ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ. ಖುದ್ದು ಯಡಿಯೂರಪ್ಪ ಅವರೇ ರಾಜೀನಾಮೆ ಘೋಷಿಸುವ ಮೂಲಕ ತಮ್ಮ ಹಿಡಿತವನ್ನು ಕಾಯ್ದುಕೊಂಡರು.

ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲೂ ಮಿಲಿಯನ್ ಡಾಲರ್ ಪ್ರಶ್ನೆಗಳು ಹುಟ್ಟಿಕೊಂಡವು. ಹೈಕಮಾಂಡ್ ಕೇಂದ್ರದ ಇಬ್ಬರು ಸಚಿವರನ್ನು ರವಾನೆ ಮಾಡಿತ್ತು. ಆದರೆ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಖುದ್ದು ಯಡಿಯೂರಪ್ಪ ಅವರೇ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಅಲ್ಲಿಗೆ ನೂತನ ನಾಯಕನ ಆಯ್ಕೆಯೂ ಯಡಿಯೂರಪ್ಪ ಅವರ ಮೂಲಕವೇ ನಡೆಯಿತು.

ನಂತರ ಪ್ರತಿ ಹಂತದಲ್ಲೂ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಸೂಚನೆಯನ್ನು ಪಾಲಿಸಲಾರಂಭಿಸಿದರು. ರಾಜಭವನಕ್ಕೂ ಅವರ ಜೊತೆಯಲ್ಲೇ ಹೋದರು.ಇಂದು ಮುಖ್ಯಮಂತ್ರಿ ಒಬ್ಬರೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಕೂಡ ಯಡಿಯೂರಪ್ಪ ಅವರ ಸೂಚನೆಯಾಗಿತ್ತು. ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಬೊಮ್ಮಾಯಿ ಅವರು ಯಡಿಯೂರಪ್ಪ ನನ್ನ ರಾಜಕೀಯ ಗುರುಗಳು, ನನ್ನ ಬೆಳವಣಿಗೆಗೆ ಕಾರಣಕತೃರು ಎಂದು ಘೋಷಿಸಿದರು.

ಇಂದು ಬೆಳಗ್ಗೆ ಬೊಮ್ಮಾಯಿ ಅವರು ಮೊದಲು ದೇವಸ್ಥಾನಕ್ಕೆ ತೆರಳಿದರು, ಬಳಿಕ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿ ಆಶೀರ್ವಚನ ಪಡೆದು ನಂತರ ರಾಜಭವನಕ್ಕೆ ಬಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅಲ್ಲಿಗೆ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ವ್ಯಕ್ತಿ ಎಂಬುದು ದೃಢವಾಯಿತು.

ಯಡಿಯೂರಪ್ಪ ಅವರನ್ನು ಬದಲಾಯಿಸಲು ಕಸರತ್ತು ನಡೆಸಿದ ಭಿನ್ನರ ಬಣ, ಮುಖ್ಯಮಂತ್ರಿ ಬದಲಾವಣೆಯವರೆಗೂ ತಾವೇ ಗೆದ್ದಿದ್ದೇವೆ ಎಂದು ಬೀಗುತ್ತಿತ್ತು. ನಿನ್ನೆ ರಾತ್ರಿಯಿಂದೀಚೆಗೆ ಚಿತ್ರಣವೇ ಬದಲಾಗಿ ಹೋಗಿದೆ. ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ನಂತರ ಬಣಗುಡುತ್ತಿದ್ದ ಅವರ ಮನೆ ಇಂದು ಮತ್ತೆ ಗಿಜಿಗುಡಲಾರಂಭಿಸಿತ್ತು.

ಸಚಿವ ಸ್ಥಾನದ ಆಕಾಂಕ್ಷಿಗಳು ಮತ್ತೆ ಯಡಿಯೂರಪ್ಪ ಅವರ ಮನೆಗೆ ನಿರಂತರವಾಗಿ ಭೇಟಿ ನೀಡಲಾರಂಭಿಸಿದರು. ಮಾಜಿ ಸಚಿವ ಮುರುಗೇಶ್ ನಿರಾಣಿ, ಶಾಸಕರಾದ ರೇಣುಕಾಚಾರ್ಯ, ಎಂ.ಪಿ.ಕುಮಾರ ಸ್ವಾಮಿ ಸೇರಿದಂತೆ ಅನೇಕ ಮಂದಿ ಬೆಳಗ್ಗೆಯಿಂದಲೇ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾರಂಭಿಸಿದರು. ಕೆಲವರು ಸಚಿವ ಸ್ಥಾನ ಕೊಡಿಸಲು ಮನವಿ ಮಾಡಿದರು.

ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಶಕ್ತಿ ಕೇಂದ್ರ ಸುರುವಾಗಿದೆ. ನಾಯಕತ್ವ ಬದಲಾವಣೆ ಮಾಡಿ ಗೆದ್ದೆವು ಎಂದು ಬೀಗುತ್ತಿದ್ದವರು ಮತ್ತೆ ಬೆಸ್ತು ಬೀಳುವಂತಾಗಿದೆ. ಇನ್ನೂ ಮುಂದೆಯೂ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲೇ ಸರ್ಕಾರ ನಡೆಯಲಿದೆ ಎಂಬುದು ಸ್ಪಷ್ಟವಾಗಿದೆ.

ಇನ್ನೇನಿದ್ದರೂ ಸಂಪುಟ ವಿಸ್ತರಣೆಯ ಕಸರತ್ತು ನಡೆಯಬೇಕಿದೆ. ವಯೋಮಿತಿಯ ಕಾರಣಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರೂ ಕೂಡ, ಹೈಕಮಾಂಡ್ ಅವರನ್ನು ಕಡೆಗಣಿಸಿಲ್ಲ ಎಂಬುದು ಸ್ಪಷ್ಟವಾಗಿದೆ. 40 ವರ್ಷಗಳ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಯಡಿಯೂರಪ್ಪ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿ ಅಗ್ರ ನಾಯಕರಲ್ಲಿ ಪ್ರಮುಖರು.

ಅವರನ್ನು ಅಷ್ಟು ಸುಲಭವಾಗಿ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ ಎಂಬುದು ಬಂಡಾಯಗಾರರಿಗೆ ಮತ್ತೊಮ್ಮೆ ಸಾಬೀತಾಗಿದೆ. ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಹವಣಿಸುತ್ತಿದ್ದ ಭಿನ್ನಮತೀಯರು ಈಗ ಮತ್ತೆ ಯುಡಿಯೂರಪ್ಪ ಅವರ ಅನುಮತಿಗಾಗಿ ಕಾಯುವ ಪರಿಸ್ಥಿತಿ ಎದುರಾದರೂ ಅಚ್ಚರಿ ಪಡಬೇಕಿಲ್ಲ.

Facebook Comments