1 ಕೋಟಿ ಮೌಲ್ಯದ ಕಾರಿನಲ್ಲಿ ಬಿಎಸ್‍ವೈ ರಾಜ್ಯ ಪ್ರವಾಸ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.26- ರಾಜ್ಯದಲ್ಲಿ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡುತ್ತೇನೆಂದು ಈಗಾಗಲೇ ಘೋಷಣೆ ಮಾಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇದಕ್ಕಾಗಿ ಹೊಸ ಕಾರನ್ನೇ ಖರೀದಿ ಮಾಡಿದ್ದಾರೆ.  ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿರುವ ಹಿನ್ನೆಲೆಯಲ್ಲಿ ಹೊಸ ಕಾರಿನಲ್ಲೇ ಯಡಿಯೂರಪ್ಪ ಅವರು ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಸುಮಾರು 1 ಕೋಟಿ ಬೆಲೆ ಬಾಳುವ ಕೆಎ-05- ಎನ್‍ಡಿ- 4545 ನೊಂದಣಿ ಸಂಖ್ಯೆಯ ಬಿಳಿ ಬಣ್ಣದ ಐಷಾರಾಮಿ ಟಯೋಟಾ ವೆಲ್‍ಫೈರ್ ಕಾರನ್ನು ಖರೀದಿಸಿದ್ದಾರೆ. ಈಗಾಗಲೇ ಹೊಸ ಕಾರಿನಲ್ಲಿ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಹೋಗಿ ಬಂದಿದ್ದಾರೆ. ವಿದೇಶ ಪ್ರವಾಸ ಮುಗಿಸಿ ವಾಪಸ್ಸಾದ ಅವರು ವಿಮಾನ ನಿಲ್ದಾಣದಿಂದ ಇದೇ ಕಾರಿನಲ್ಲಿ ಕಾವೇರಿಗೆ ಆಗಮಿಸಿದ್ದರು.

78 ವರ್ಷದ ಯಡಿಯೂರಪ್ಪ ಇದೇ ಕಾರಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ 2023ರ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟನೆ ಮಾಡಲಿದ್ದಾರೆ. ಗಣಪತಿ ಹಬ್ಬದ ಬಳಿಕ ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಇಷ್ಟು ದಿನ ಸರ್ಕಾರದ ಅಧಿಕೃತ ಕಾರನ್ನು ಯಡಿಯೂರಪ್ಪ ಅವರು ಬಳಕೆ ಮಾಡುತ್ತಿದ್ದರು. ಇದಕ್ಕೂ ಮುನ್ನ ಪುತ್ರ ವಿಜಯೇಂದ್ರ ಅವರ ಕಾರನ್ನು ಬಳಕೆ ಮಾಡುತ್ತಿದ್ದರು. 2018ರ ವಿಧಾನಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಯಡಿಯೂರಪ್ಪ ಅವರ ಬಳಿ ಯಾವುದೇ ಸ್ವಂತ ಕಾರುಗಳಿಲ್ಲ ಎಂದು ತಿಳಿಸಲಾಗಿತ್ತು.

ಪ್ರಸ್ತುತ ಯಡಿಯೂರಪ್ಪ ಅವರು ಖರೀದಿ ಮಾಡಿರುವ ಕಾರಿನ ಬೆಲೆ ರೂ.87 ಲಕ್ಷವಾಗಿದ್ದು, ತೆರಿಗೆ ಸೇರಿ ಒಟ್ಟಾರೆ ಕಾರಿನ ಬೆಲೆ ರೂ.1 ಕೋಟಿ ಆಗಿದೆ ಎಂದು ಮಾಜಿ ಮುಖ್ಯಮಂತ್ರಿಗಳ ಆಪ್ತ ಮೂಲಗಳು ಮಾಹಿತಿ ನೀಡಿವೆ. ರಾಜ್ಯದ ಪ್ರತಿ ಜಿಲ್ಲೆಗೆ ಭೇಟಿ ಕೊಡುವ ಚಿಂತನೆಯಲ್ಲಿ ಯಡಿಯೂರಪ್ಪ ಇದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತ ಕ್ಷೇತ್ರಗಳಲ್ಲಿ ಮೊದಲು ಅವರು ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಪ್ರವಾಸದ ರೂಪುರೇಷೆ ಇನ್ನೂ ತಯಾರಾಗುತ್ತಿದೆ.

1980ರಲ್ಲಿ ಯಡಿಯೂರಪ್ಪ ಅವರು ತವರು ಜಿಲ್ಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದರು. ಈ ಮೂಲಕ ಪಕ್ಷದ ಪರ ಪ್ರಚಾರವನ್ನೂ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಯಡಿಯೂರಪ್ಪ ಸೇರಿ ಇಬ್ಬರು ಬಿಜೆಪಿ ಶಾಸಕರು ಮಾತ್ರ ಇದ್ದರು. ಇದೀಗ ಮುಖ್ಯಮಂತ್ರಿ ಸ್ಥಾನ ತ್ಯಾಗ ಮಾಡಿದ ಬಳಿಕವೂ ಪಕ್ಷವನ್ನು ಬಲಪಡಿಸುವುದಾಗಿ ತಿಳಿಸಿದ್ದರು.

Facebook Comments