ಬದಲಾದ ರಾಜಕೀಯ ಪರಿಸ್ಥಿತಿ : 4ನೇ ಸಾಲಿನಲ್ಲಿ ಬಿಎಸ್‍ವೈಗೆ ಕುರ್ಚಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.13- ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಂದು ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಪ್ರಮುಖ ನಾಯಕರ ಕುರ್ಚಿಗಳು ಸ್ಥಾನಪಲ್ಲಟವಾದ ದೃಶ್ಯ ಕಂಡು ಬಂದಿತು. ಈವರೆಗೂ ಆಡಳಿತ ಪಕ್ಷದ ಮೊದಲ ಸಾಲಿನಲ್ಲಿನ ಇರುತ್ತಿದ್ದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್‍ಶೆಟ್ಟರ್ ನಾಲ್ಕನೆ ಸಾಲಿನ ಕುರ್ಚಿಯನ್ನು ಅಲಂಕರಿಸಿದ್ದರು.

ಎರಡನೇ ಸಾಲಿನಲ್ಲಿ ಕೂರುತ್ತಿದ್ದ ಬಸವರಾಜ ಬೊಮ್ಮಾಯಿ ಅವರು ಇದೀಗ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವುದರಿಂದ ಆಡಳಿತ ಪಕ್ಷದ ಮೊದಲ ಸಾಲಿನ ಒಂದನೆ ಕುರ್ಚಿಯಲ್ಲಿ ಕುಳಿತಿದ್ದರು. ಮೂರನೇ ಸಾಲಿನಲ್ಲಿ ಇರುತ್ತಿದ್ದ ಗೃಹ ಸಚಿವ ಆರಗಜ್ಞಾನೇಂದ್ರ ಅವರು ಮೊದಲ ಸ್ಥಾನಕ್ಕೆ ಮುಂಬಡ್ತಿ ಪಡೆದಿದ್ದರು. ಕಳೆದ ಅಧಿವೇಶನ ಸಂದರ್ಭದಲ್ಲಿ ಎರಡನೇ ಸಾಲಿಗೆ ಹಿಂಬಡ್ತಿ ಪಡೆದಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಈ ಅಧಿವೇಶನದಲ್ಲಿ ಮೊದಲ ಸಾಲಿಗೆ ಬಂದಿದ್ದರು.

ಈವರೆಗೂ ನಾಲ್ಕನೆ ಸಾಲಿನಲ್ಲಿ ಕೂರುತ್ತಿದ್ದ ಸಚಿವರಾದ ವಿ.ಸುನೀಲ್‍ಕುಮಾರ್, ಬಿ.ಸಿ.ನಾಗೇಶ್, ಹಾಲಪ್ಪ ಆಚಾರ್, ಮುನಿರತ್ನ ಮತ್ತಿತರರು ಎರಡನೆ ಸಾಲಿಗೆ ಮುಂಬಡ್ತಿ ಪಡೆದಿದ್ದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅವರ ಹಿರಿತನಕ್ಕೆ ತಕ್ಕಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾಲ್ಕನೆ ಸಾಲಿನಲ್ಲಿ ಕುರ್ಚಿಯನ್ನು ನಿಗದಿ ಪಡಿಸಿದ್ದರು.

ಸಂಪುಟ ಸೇರಲು ಹಿಂದೇಟು ಹಾಕಿದ ಕಾರಣ ಮಾಜಿ ಸಿಎಂ ಜಗದೀಶ್ ಶೆಟ್ಟರ್‍ಗೂ ಕೂಡ ಅದೇ ಸಾಲಿನಲ್ಲಿ ಕುರ್ಚಿಯನ್ನು ನಿಗದಿ ಪಡಿಸಲಾಗಿತ್ತು.
ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಹಿರಿಯ ಸದಸ್ಯರಾಗಿರುವ ಕಾರಣ ಅವರು ಕೇಳಿದ ಸಾಲಿನಲ್ಲೇ ಆಸನ ನಿಗದಿಪಡಿಸುವ ಸಂಪ್ರದಾಯವಿದೆ.

Facebook Comments