ತಮ್ಮ ವರ್ಚಸ್ಸು ಕುಂದದಂತೆ ನೋಡಿಕೊಳ್ಳಲು ಬಿಎಸ್‍ವೈ ತಂತ್ರಗಾರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.2-ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿ.ಎಸ್.ಯಡಿಯೂರಪ್ಪ ಅಧಿಕಾರವಿಲ್ಲದಿದ್ದರೂ ರಾಜ್ಯದಲ್ಲಿ ತಮಗಿರುವ ವರ್ಚಸ್ಸು ಕುಂದದಂತೆ ನೋಡಿಕೊಳ್ಳಲು ರಾಜ್ಯ ರಾಜಕೀಯದಲ್ಲಿ ಹಿಡಿತ ಸಾಧಿಸಲು ಹೊಸ ಗೇಮ್ ಪ್ಲಾನ್ ರೂಪಿಸಿದ್ದಾರೆ.  ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ತಮಗೂ ಮಾಗರ್ದರ್ಶಕ ಮಂಡಳಿ ಸೇರುವ ಪರಿಸ್ಥಿತಿ ಬಾರದಿರಲಿ ಎಂದು ರಾಜಕಾರಣದಲ್ಲಿ ಸಕ್ರಿಯವಾಗಿರಲು ನಿರ್ಧರಿಸಿದ್ದಾರೆ.

ಅದಕ್ಕಾಗಿ ರಾಜ್ಯ ಪ್ರವಾಸದ ಹಾದಿ ಆಯ್ಕೆ ಮಾಡಿದ್ದಾರೆ. 1983ರಿಂದ 2021ರವರೆಗೂ ಸುದೀರ್ಘ ರಾಜಕಾರಣದಲ್ಲಿ ಯಡಿಯೂರಪ್ಪ ವಿರಮಿಸಿಯೇ ಇಲ್ಲ. 2006-2011ರವರೆಗೆ ಮತ್ತು 2019-2021ರವರೆಗೆ ಒಟ್ಟು 7 ವರ್ಷ ಮಾತ್ರ ಸರ್ಕಾರದಲ್ಲಿದ್ದ ಯಡಿಯೂರಪ್ಪ ಉಳಿದಂತೆ ಪ್ರತಿಪಕ್ಷದಲ್ಲಿದ್ದುಕೊಂಡು ಹೋರಾಟ ಮಾಡಿಕೊಂಡೇ ಬಂದವರು. ನಿಂತಲ್ಲಿ ನಿಲ್ಲದೆ ಪಾದರಸದಂತೆ ಸದಾ ಚಟುವಟಿಕೆಯಿಂದ ಇದ್ದು ಪ್ರವಾಸದ ಮೂಲಕ ಪಕ್ಷ ಸಂಘಟನೆ ಮಾಡುತ್ತಲೇ ಜೀವ ಸವೆಸಿದವರು. ಈಗ 79 ವರ್ಷವಾದರೂ ರಾಜ್ಯವಾಳಿರುವ ಅವರು ಈಗ ಸುಮ್ಮನೆ ಕೂರುವ ಜಾಯಮಾನದವರಲ್ಲ.

ಸದಾ ಜನರೊಂದಿಗೆ ಇರುವುದನ್ನೇ ರೂಢಿಸಿಕೊಂಡು ಬಂದಿರುವ ಬಿಎಸ್‍ವೈ ಈಗಲೂ ಅದೇ ಜನರ ಜೊತೆ ಇರುವ ಬಯಕೆ ಹೊಂದಿದ್ದಾರೆ. ಕೇವಲ ಲಿಂಗಾಯತ ಸಮುದಾಯಕ್ಕೆ ಸೀಮಿತವಾಗದೆ ಮಾಸ್ ಲೀಡರ್ ಆಗಿ ಬೆಳೆದಿದ್ದು, ಈಗ ತಮಗಿರುವ ಮಾಸ್ ಇಮೇಜ್‍ನ್ನು ಮುಂದಿನ ಚುನಾವಣೆವರೆಗೂ ಕಾಪಾಡಿಕೊಳ್ಳಲು ತಂತ್ರ ಹೆಣೆದಿದ್ದಾರೆ.

ಸದ್ಯ ರಾಜ್ಯ ಬಿಜೆಪಿಗೆ ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ್ದರೂ ಯಡಿಯೂರಪ್ಪ ಅವರೇ ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರವಾಗಿದ್ದಾರೆ. ಪಕ್ಷದಲ್ಲಿ ತಮ್ಮದೇ ಹಿಡಿತ ಇದೆ. ಇದೇ ಹಿಡಿತವನ್ನು ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆವರೆಗೂ ಹೊಂದಿರಬೇಕು ಎಂಬುದು ಅವರ ಬಯಕೆಯಾಗಿದೆ. ಟಿಕೆಟ್ ಹಂಚಿಕೆಯಲ್ಲಿ ತಮ್ಮ ಪಾತ್ರ ಪ್ರಮುಖವಾಗಿರಬೇಕು. ಹಾಗಾಗಿ, ಈಗಿರುವ ಇಮೇಜ್ ಕಡಿಮೆಯಾಗದಂತೆ ನೋಡಿಕೊಳ್ಳಬೇಕಿದೆ.

# ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿ :
ಬಿಜೆಪಿಯಲ್ಲಿ ಉಕ್ಕಿನ ಮನುಷ್ಯ ಎಂದೇ ಹೆಸರು ಮಾಡಿದ್ದ ಅಡ್ವಾಣಿ ಮಾರ್ಗದರ್ಶಕ ಮಂಡಳಿ ಸೇರುತ್ತಿದ್ದಂತೆ ಜನರಿಂದ ದೂರ ಉಳಿದು ನೇಪಥ್ಯಕ್ಕೆ ಸರಿದಿದ್ದಾರೆ. ಪಕ್ಷದಲ್ಲಿ ಇಂದು ಅವರ ಯಾವುದೇ ಮಾತುಗಳು ನಡೆಯದ ಸ್ಥಿತಿ ಇದೆ. ಅಂತಹ ಸ್ಥಿತಿ ತಮಗೆ ಎದುರಾಗಬಾರದು ಎನ್ನುವಕಾರಣಕ್ಕೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಸ್ವತಃ ವಹಿಸಿಕೊಂಡಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನೂ ಮಾಡಿದ್ದಾರೆ.

ಜನರಿಂದ ದೂರ ಉಳಿದರೆ ಎಂತಹ ನಾಯಕನಾದರೂ ಜನರ ಮನಸ್ಸಿನಿಂದ ದೂರವಾಗಿ ಬಿಡುತ್ತೇನೆಂದು ಅರಿತಿರುವ ಬಿಎಸ್‍ವೈ ಜನರ ಬಳಿ ತೆರಳಿ ಜನಮಾನಸದಲ್ಲಿ ಉಳಿಯಲು ರಾಜ್ಯ ಪ್ರವಾಸದ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿ ವಾರ ಒಂದೊಂದು ತಾಲೂಕಿಗೆ ಹೋಗಿ ಪಕ್ಷ ಸಂಘಟನೆ ಮಾಡುವ ಮೂಲಕ ವಯಸ್ಸಿನ ಕಾರಣ ನೀಡಿ ಅಧಿಕಾರದಿಂದ ಇಳಿಸಿರುವ ಹೈಕಮಾಂಡ್ ನಾಯಕರಿಗೆ ತಾವಿನ್ನೂ ರಾಜಕೀಯವಾಗಿ ಶಕ್ತನಿದ್ದೇನೆ ಎಂದು ತೋರಿಸಲು ಮುಂದಾಗಿದ್ದಾರೆ.

ಅದಕ್ಕಾಗಿಯೇ ರಾಜ್ಯಪಾಲ ಹುದ್ದೆಯನ್ನು ಯಡಿಯೂರಪ್ಪ ನಿರಾಕರಿಸಿದ್ದಾರೆ. ಮಕ್ಕಳ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ: ರಾಜ್ಯಪಾಲ ಹುದ್ದೆ ವಹಿಸಿಕೊಂಡರೆ ಜನರಿಂದ ದೂರವಾಗಬೇಕಾಗಿದೆ. ಸಕ್ರಿಯ ರಾಜಕಾರಣದಿಂದ ದೂರ ಉಳಿದರೆ ಜನ ಯಡಿಯೂರಪ್ಪ ನಾಯಕತ್ವವನ್ನು ಮರೆತು ಬಿಡುತ್ತಾರೆ. ಹೀಗಾದಲ್ಲಿ ಮಕ್ಕಳ ರಾಜಕೀಯ ಉನ್ನತಿಗೆ ಹೆಗಲು ಕೊಡಲು ಕಷ್ಟವಾಗಲಿದೆ ಎಂಬುದು ಯಡಿಯೂರಪ್ಪ ಅವರನ್ನು ಕಾಡುತ್ತಿರುವ ಆತಂಕ.

ಹಾಗಾಗಿ , ಸಕ್ರಿಯ ರಾಜಕೀಯದಲ್ಲಿದ್ದುಕೊಂಡೇ ಮುಂದಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮೂಲಕ ಪಕ್ಷದಲ್ಲಿ ಹಿಡಿತ ಮುಂದುವರೆಸುವುದು ಮತ್ತು ಮಕ್ಕಳ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವುದು ಯಡಿಯೂರಪ್ಪನವರ ಬಯಕೆಯಾಗಿದೆ. ಹೀಗಾಗಿ ಗಣೇಶ ಚತುರ್ಥಿ ನಂತರ ರಾಜ್ಯ ಪ್ರವಾಸ ಆರಂಭಿಸುವುದಾಗಿ ಈಗಾಗಲೇ ಘೋಷಣೆ ಮಾಡಿರುವ ಮಾಜಿ ಸಿಎಂ ಯಡಿಯೂರಪ್ಪ, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಯಾವ ಭಾಗದಿಂದ ಪ್ರವಾಸ ಆರಂಭಿಸಬೇಕು, ಪ್ರವಾಸ ಯಾವ ರೀತಿ ಇರಬೇಕು ಎನ್ನುವ ಕುರಿತು ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ.

ರೆಸಾರ್ಟ್‍ನಲ್ಲಿ ವಿಶ್ರಾಂತಿ : ರಾಜ್ಯ ಪ್ರವಾಸದ ಆರಂಭಕ್ಕೂ ಮುನ್ನ ಒಂದು ವಿಶ್ರಾಂತಿ ಪಡೆಯಲು ಯಡಿಯೂರಪ್ಪ ಮುಂದಾಗಿದ್ದಾರೆ. ಸತತ ಎರಡು ವರ್ಷ ನೆರೆ, ಕೊರೊನಾ ಸಂಕಷ್ಟ ಎದುರಿಸಿ ಆಡಳಿತ ನಡೆಸಿರುವ ಯಡಿಯೂರಪ್ಪ ಎರಡು ಬಾರಿ ಕೊರೊನಾ ಸೋಂಕಿಗೂ ಸಿಲುಕಿ ಗೆದ್ದು ಬಂದಿದ್ದಾರೆ. ನಿರಂತರ ಒತ್ತಡದ ಕೆಲಸದಿಂದ ದಣಿದಿರುವ ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಒಂದು ವಾರ ಕುಟುಂಬ ಸಮೇತ ರೆಸಾರ್ಟ್‍ಗೆ ತೆರಳಿ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

Facebook Comments