ಎರಡೂ ಕ್ಷೇತ್ರಗಳಲ್ಲಿ ಎರಡೆರಡು ದಿನ ಬಿಎಸ್‌ವೈ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.18- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಲಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ತಲಾ ಎರಡೆರಡು ದಿನ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.

ಇಂದು ಮಧ್ಯಾಹ್ನ 2.30ಕ್ಕೆ ರಸ್ತೆ ಮಾರ್ಗದ ಮೂಲಕ ಚಿತ್ರದುರ್ಗಕ್ಕೆ ತೆರಳಲಿರುವ ಯಡಿಯೂರಪ್ಪ, ಸಂಜೆ 6.30ಕ್ಕೆ ಬಸವ ಕೇಂದ್ರದಲ್ಲಿರುವ ಅನುಭವ ಮಂಟಪದಲ್ಲಿ ಆಯೋಜಿಸಲಾಗಿರುವ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ರಾತ್ರಿ ಶಿವಮೊಗ್ಗಕ್ಕೆ ತೆರಳಿ, ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ 19ರ ಮಂಗಳವಾರ ಹೊನ್ನಾಳಿ ತಾಲೂಕಿನ ನ್ಯಾಮತಿಗೆ ತೆರಳಲಿ, ಬೆಳಗ್ಗೆ 11 ಗಂಟೆಗೆ ಕೋವಿಡ್-19 ವೇಳೆ ಸೇವೆ ಸಲ್ಲಿಸಿದ ಮಹಿಳೆಯರಿಗೆ ಆಯೋಜಿಸಿರುವ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಂತರ ಬಾಗಲಕೋಟೆಗೆ ತೆರಳಲಿದ್ದು, ಆಲಮಟ್ಟಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ 20ರ ಬೆಳಗ್ಗೆ 10.30ಕ್ಕೆ ಸಿಂಧಗಿ ಉಪ ಚುನಾವಣಾ ಪ್ರಚಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಇಡೀ ದಿನ ಕ್ಷೇತ್ರದ ಹಲವು ಭಾಗದಲ್ಲಿ ಪಕ್ಷ ಆಯೋಜಿಸಿರುವ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.ಅಂದು ರಾತ್ರಿ ವಿಜಯಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಅ.21ರ ಗುರುವಾರ ಮತ್ತೆ ಸಿಂಧಗಿಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಇಡೀ ದಿನ ಕ್ಷೇತ್ರದಲ್ಲಿ ನಡೆಯುವ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅಂದು ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅ.22ರ ಶುಕ್ರವಾರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಹಾನಗಲ್ ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ.

ಅಂದು ರಾತ್ರಿ ಸ್ವಕ್ಷೇತ್ರ ಶಿಕಾರಿಪುರಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಅ.23ರ ಶನಿವಾರದಂದು ಬೆಳಗ್ಗೆ 10ರಿಂದ ಸಂಜೆ 6ಗಂಟೆವರೆಗೆ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅಂದು ರಾತ್ರಿ ಶಿಕಾರಿಪುರಕ್ಕೆ ಮರಳಿ ವಾಸ್ತವ್ಯ ಹೂಡಲಿದ್ದು, ಅ.24ರ ಭಾನುವಾರ ಬೆಂಗಳೂರಿಗೆ ವಾಪಸಾಗಲಿದ್ದಾರೆ.

Facebook Comments