ಪ್ರವಾಹ ತಡೆಯಲು ಸರ್ಕಾರ ಸರ್ವ ಸನ್ನದ್ದ : ಸಿಎಂ ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ,ಜು.10- ರಾಜ್ಯದಲ್ಲಿ ಎಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಪ್ರವಾಹ ತಡೆಯಲು ಸರ್ಕಾರ ಸರ್ವ ಸನ್ನದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ವಿವಿಧ ಕಾರ್ಯಕ್ರಮಗಳ ನಿಮಿತ್ತ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲೆಡೆ ನಿರೀಕ್ಷೆಗೂ ಮೀರಿದ ಮಳೆಯಾಗುತ್ತಿದೆ. ಕೆರೆಕಟ್ಟೆಗಳು, ಹಳ್ಳಕೊಳ್ಳಗಳು, ನದಿಗಳು, ಅಣೆಕಟ್ಟುಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕರಾವಳಿ ತೀರಪ್ರದೇಶ, ಮಲೆನಾಡು, ಕಲ್ಯಾಣ ಕರ್ನಾಟಕ ಸೇರಿದಂತೆ ಮತ್ತಿತರ ಕಡೆ ಉತ್ತಮ ಮಳೆಯಾಗುತ್ತಿದೆ. ಪ್ರವಾಹ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದರು. ವಿಶೇಷವಾಗಿ ಈ ಬಾರಿ ಮಹಾರಾಷ್ಟ್ರದಿಂದ ನಮಗೆ ಹೆಚ್ಚಿನ ತೊಂದರೆಯಾಗುವ ಲಕ್ಷಣಗಳಿಲ್ಲ. ರಾಜ್ಯಕ್ಕೆ ಜಲಾಶಯದಿಂದ ನೀರು ಬಿಡುವ ಮುನ್ನ ರಾಜ್ಯಕ್ಕೆ ಮಾಹಿತಿ ನೀಡಬೇಕೆಂದು ಸೂಚನೆ ಕೊಡಲಾಗಿದೆ. ಇದಕ್ಕೆ ಅಲ್ಲಿನ ಸರ್ಕಾರವು ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.

ಸಚಿವ ಸಂಪುಟ ಸಭೆ ಇಲ್ಲ:
ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ಈಗಿನ ಸಂದರ್ಭದಲ್ಲಿ ನಡೆಸಲು ಸಾಧ್ಯವೇ ಇಲ್ಲ. ಏಕೆಂದರೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಾಗಿರುವುದರಿಂದ ಇದು ಕಷ್ಟಸಾಧ್ಯ ಎಂದು ಪ್ರತಿಕ್ರಿಯಿಸಿದರು.

ಸಂಪುಟ ಸಭೆ ನಡೆಯಬೇಕೆಂಬುದು ಈ ಭಾಗದ ಜನತೆಯ ಒತ್ತಾಸೆಯಾಗಿದೆ. ಆದರೆ ಕೋವಿಡ್ ಇರುವ ಕಾರಣ ಜನರ ಸುರಕ್ಷತೆಯನ್ನೂ ನೋಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಇದು ಸಾಧ್ಯವೇ ಇಲ್ಲ. ಇದಕ್ಕೆ ಜನತೆಯು ಅಪಾರ್ಥ ಕಲ್ಪಿಸಿಕೊಳ್ಳಬಾರದು ಎಂದು ಸಿಎಂ ಮನವಿ ಮಾಡಿದರು.

Facebook Comments