ಬಿಎಸ್‍ಎಫ್ ಯೋಧರ ಗುಂಡಿಗೆ ಪಾಕ್ ನುಸುಳುಕೋರ ಖತಂ

ಈ ಸುದ್ದಿಯನ್ನು ಶೇರ್ ಮಾಡಿ

ಅಟಾರಿ(ಪಂಜಾಬ್), ಅ.17 (ಪಿಟಿಐ)- ಇಂಡೋ-ಪಾಕ್ ಗಡಿ ಭಾಗದ ಅಟಾರಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಯೋಧರು ಪಾಕಿಸ್ತಾನದ ಸುಳುಕೋರನೊಬ್ಬನನ್ನು ಹೊಡೆದುರುಳಿಸಿದ್ದಾರೆ.  ಹತನಾದ ಆಕ್ರಮಣಕೋರನನ್ನು ಗುಲ್‍ನವಾಜ್ ಎಂದು ಗುರುತಿಸಲಾಗಿದೆ. ಈತ ಪಾಕಿಸ್ತಾನ ಕಡೆಯಿಂದ ಭಾರತದೊಳಗೆ ನುಸುಳಲು ಯತ್ನಿಸಿದ್ದ.

ನಿನ್ನೆ ಸಂಜೆ ಅಟಾರಿ ಗಡಿ ಭಾಗದಲ್ಲಿ ರೈಲ್ವೆ ಹಳಿ ಮೂಲಕ ಶೂನ್ಯ ರೇಖೆ ಮುಳ್ಳುತಂತಿ ಬೇಲಿ ಸಮೀಪ ಗೇಟ್ ನಂಬರ್ 103ರತ್ತ ಈತ ಧಾವಿಸುತ್ತಿದ್ದ. ಇದನ್ನು ಗಮನಿಸಿದ ಬಿಎಸ್‍ಎಫ್ ಯೋಧರು ತಕ್ಷಣ ಹಿಂದಿರುಗುವಂತೆ ಸೂಚಿಸಿದರು. ಆದರೆ ಈ ಎಚ್ಚರಿಕೆಯನ್ನು ಧಿಕ್ಕರಿಸಿ ಗುಲ್‍ನವಾಜ್ ಮುಂದುವರಿಯಲು ಯತ್ನಿಸಿದಾಗ ಯೋಧರು ಗುಂಡು ಹಾರಿಸಿ ಹೊಡೆದುರುಳಿಸಿದರು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆ ನಂತರ ಪಾಕಿಸ್ತಾನ ಯೋಧರೊಂದಿಗೆ ಈ ನುಸುಳುವಿಕೆ ಯತ್ನ ಕುರಿತು ಚರ್ಚಿಸಲು ಧ್ವಜ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮೃತದೇಹವನ್ನು ಒಯ್ಯುವಂತೆ ಪಾಕಿಸ್ತಾನಕ್ಕೆ ತಿಳಿಸಲಾಯಿತಾದರೂ, ಅವರು ನಿರಾಕರಿಸಿದ್ದಾರೆ.

Facebook Comments