ಪಾಕ್-ಬಾಂಗ್ಲಾ ಗಡಿ ಪ್ರದೇಶದ ಶೋಧ ಕಾರ್ಯಚರಣೆ ವಿಶೇಷ ಅಧಿಕಾರ ಕೊಟ್ಟ ಕೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.14-ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದ ಹೊಂದಿಕೊಂಡಂತೆ ಇರುವ ಮೂರು ರಾಜ್ಯಗಳ 50 ಕಿ.ಮೀ ವ್ಯಾಪ್ತಿಯೊಳಗೆ ಶೋಧ ಕಾರ್ಯಚರಣೆ ನಡೆಸುವುದು, ಬಂಧಿಸುವುದು ಹಾಗೂ ವಶಪಡಿಸಿಕೊಳ್ಳುವ ಅವಕಾಶವನ್ನು ಭದ್ರತಾ ಪಡೆಗಳಿಗೆ ನೀಡಲಾಗಿದೆ. ಅಂತಾರಾಷ್ಟ್ರೀಯ ಗಡಿ ಪ್ರದೇಶಗಳ ಸಮೀಪ ಶತ್ರು ರಾಷ್ಟ್ರಗಳು ಡ್ರೋಣ್ ಬಳಕೆ ಮಾಡಿ ಗಡಿಯೊಳಕ್ಕೆ ಶಸ್ತ್ರಾಸ್ತ್ರ ಸಾಗಿಸುವುದು ಸಾಮಾನ್ಯವಾಗಿರುವುದರಿಂದ ಕೇಂದ್ರ ಗೃಹ ಸಚಿವಾಲಯ ಭದ್ರತಾ ಪಡೆಗಳಿಗೆ ಈ ವಿಶೇಷ ಅಧಿಕಾರ ನೀಡಿದೆ.

ಕೇಂದ್ರ ಸರ್ಕಾರದ ಈ ನಡೆಗೆ ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ರಾಜ್ಯದೊಳಗೆ ಭದ್ರತಾ ಪಡೆಗಳು ಬಂದು ಶೋಧ ನಡೆಸುವುದು ಆಯಾ ರಾಜ್ಯಗಳಿಗೆ ಇರುವ ಸ್ವಾಯತತ್ತೆಗೆ ಧಕ್ಕೆ ತರುತ್ತದೆ. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಈ ನಿರ್ಧಾರವನ್ನು ಕೂಡಲೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಗಡಿ ವ್ಯಾಪ್ತಿಯಲ್ಲಿರುವ 10 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.

ಭದ್ರತಾ ಪಡೆಗಳು ಇರುವುದು ದೇಶದ ಗಡಿ ಕಾಯಲು ಹಾಗೂ ಒಳನುಸುಳುವಿಕೆ ತಡೆಗಟ್ಟಲು ಅಂತಹ ಪಡೆಗಳನ್ನು ದೇಶದ ಒಳಗೆ ಕಾರ್ಯಚರಣೆ ನಡೆಸಲು ಅನುವು ಮಾಡಿಕೊಡುವುದು ಸೂಕ್ತ ಕ್ರಮವಲ್ಲ ಎನ್ನುತ್ತಾರೆ ಹಿರಿಯ ಪೊಲೀಸ್ ಅಕಾರಿಯೊಬ್ಬರು.

ಆದರೆ, ನಮಗೆ ಈ ಅಧಿಕಾರ ನೀಡಿರುವುದು ಸೂಕ್ತವಾಗಿದೆ. ಯಾವುದೇ ರಾಜ್ಯದಲ್ಲಿ ನಡೆಯುವ ದೇಶದ್ರೋಹ ಚಟುವಟಿಕೆಗಳ ಬಗ್ಗೆ ಗುಪ್ತಚರ ಮಾಹಿತಿ ಬಂದರೆ ನಾವು ಸ್ಥಳೀಯ ಪೊಲೀಸರ ಅನುಮತಿ ಪಡೆಯದೆ ನಿಗತ ಸಮಯಕ್ಕೆ ಕಾರ್ಯಚರಣೆ ನಡೆಸಿ ಪ್ರಮಾದವಾಗುವುದನ್ನು ತಪ್ಪಿಸಲು ಸಹಕಾರಿಯಾಗಲಿದೆ ಎನ್ನುತ್ತಾರೆ ಭದ್ರತಾ ಪಡೆ ಸಿಬ್ಬಂದಿಗಳು.

ಹೊಸ ಅಸೂಚನೆ ಪ್ರಕಾರ ಭದ್ರತಾ ಪಡೆಗಳು ಇನ್ನು ಮುಂದೆ ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಅಸ್ಸಾಂ ರಾಜ್ಯಗಳ 50 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಶೋಧ ಕಾರ್ಯಚರಣೆ ನಡೆಸಬಹುದಾಗಿದೆ. ಈ ಹಿಂದೆ ಗಡಿಯಲ್ಲಿರುವ ಕೆಲ ರಾಜ್ಯಗಳ 15 ಕಿ.ಮೀ ವ್ಯಾಪ್ತಿಯಲ್ಲಿ ಶೋಧ ನಡೆಸುವ ಅಧಿಕಾರ ಭದ್ರತಾ ಪಡೆಗಳಿಗಿತ್ತು.

Facebook Comments