ಗಡಿಯಲ್ಲಿ ಕಳ್ಳಸಾಗಣೆ ನಿಗ್ರಹಕ್ಕೆ ಬಿಎಸ್‍ಎಫ್ ನೆರವು ಕೋರಿದ ಬಾಂಗ್ಲಾ

ಈ ಸುದ್ದಿಯನ್ನು ಶೇರ್ ಮಾಡಿ

ರಂಗ್‍ಪುರ್(ಬಾಂಗ್ಲಾದೇಶ), ಜು.16(ಪಿಟಿಐ)-ಇಂಡೋ-ಬಾಂಗ್ಲಾ ಗಡಿಯಲ್ಲಿ ಕಳ್ಳಸಾಗಣೆ ಅವ್ಯಾಹತವಾಗಿ ಮುಂದುವರಿದಿದ್ದು, ಈ ಹಾವಳಿಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಭಾರತೀಯ ಗಡಿ ಭದ್ರತೆ(ಬಿಎಸ್‍ಎಫ್) ಮತ್ತಷ್ಟು ದೊಡ್ಡ ಮಟ್ಟದಲ್ಲಿ ಸಹಕಾರ ನೀಡಬೇಕೆಂದು ಬಾಂಗ್ಲಾದೇಶ ಕೋರಿದೆ.

ಭಾರತ-ಬಾಂಗ್ಲಾ ಗಡಿಯಲ್ಲಿ ಗಡಿಯಾಚೆ ಗಿನ ಕಳ್ಳಸಾಗಣೆ ಸಂಪೂರ್ಣವಾಗಿ ನಿಂತಿಲ್ಲ. ಈ ದಂಧೆಯನ್ನು ನಿಗ್ರಹಿಸಲು ತನಗೆ ಮತ್ತಷ್ಟು ಸಹಕಾರ ಮತ್ತು ಬೆಂಬಲ ನೀಡಬೇಕೆಂದು ಬಾಂಗ್ಲಾದೇಶ ಗಡಿ ಭದ್ರತಾ ಪಡೆ ಕೋರಿದೆ.  ಜಾನುವಾರು(ದನಗಳು), ಮಾದಕ ವಸ್ತುಗಳು, ಚರ್ಮ, ಶಸ್ತಾಸ್ತ್ರಗಳು ಉಭಯ ದೇಶಗಳ ಗಡಿಯಲ್ಲಿ ಬಿಎಸ್‍ಎಫ್ ಮತ್ತು ಬಿಜಿಬಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಜು.11ರಂದು ಪಶ್ಚಿಮ ಬಂಗಾಳದ ಇಂಡೋ-ಬಾಂಗ್ಲಾ ಗಡಿ ಬಳಿ ಬಾಂಗ್ಲಾದೇಶಿ ಜಾನುವಾರು ಕಳ್ಳಸಾಗಣೆದಾರರು ನಡೆಸಿದ ಬಾಂಬ್ ದಾಳಿಯಲ್ಲಿ ಬಿಎಸ್‍ಎಫ್ ಯೋಧರೊಬ್ಬರು ತಮ್ಮ ಕೈ ಕಳೆದುಕೊಂಡು ಗಂಭೀರ ಗಾಯಗೊಂಡರು.  ಬಾಂಗ್ಲಾದೇಶದ ಗಡಿಯನ್ನು ಭಾರತದ ಜಾನುವಾರು ಕಳ್ಳರು ಅಥವಾ ಕಳ್ಳಸಾಗಣೆದಾರರು ಒಮ್ಮೆ ದಾಟಿದರೆ ಅವರನ್ನು ಅಲ್ಲಿ ವರ್ತಕರು ಎಂದು ಪರಿಗಣಿಸಲಾಗುತ್ತದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಂಗ್ಲಾ ಗಡಿಯಲ್ಲಿ ಒಂದು ದನಕ್ಕೆ 500 ರೂ.ಗಳ ಟಾಕಾ ನೀಡಿ ಅದನ್ನು ಯಾರಿಗೆ ಬೇಕಾದರೂ ಮಾರಲು ಕಳ್ಳರಿಗೆ ಅವಕಾಶ ಇರುವುದರಿಂದಲೇ ಗಡಿಯಲ್ಲಿ ಜಾನುವಾರು ಕಳ್ಳಸಾಗಣೆ ಅವ್ಯಾಹತವಾಗಿ ಮುಂದುವರಿದಿದೆ. ಬಾಂಗ್ಲಾದೇಶದಲ್ಲಿ ಭಾರತದ ಜಾನುವಾರುಗಳಿಗೆ ಭಾರೀ ಬೇಡಿಕೆ ಇದೆ. ಇದೇ ಕಾರಣಕ್ಕಾಗಿ ಗಡಿ ಮೂಲಕ ಜಾನುವಾರುಗಳನ್ನು ಕಳ್ಳಸಾಗಣೆ ಮಾಡಿ ಸ್ಮಗ್ಲರ್‍ಗಳು ಭಾರೀ ಲಾಭ ಗಿಟ್ಟಿಸುತ್ತಿದ್ದಾರೆ.

ತಮ್ಮ ಈ ದಂಧೆಗೆ ಅಡ್ಡಿಯಾಗುವ ಗಡಿ ಭದ್ರತಾ ಪಡೆಗಳ ಮೇಲೆ ಕಳ್ಳಕಾಕರು ದಾಳಿ ನಡೆಸಿ ಅವರನ್ನು ಕೊಂದು ಹಾಕುತ್ತಾರೆ ಅಥವಾ ಗಂಭೀರವಾಗಿ ಗಾಯಗೊಳಿಸುತ್ತಾರೆ ಎಂದು ತಮ್ಮ ಹೆಸರನ್ನು ಬಹಿರಂಗಗೊಳಿಸಲು ಇಚ್ಚಿಸದ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

Facebook Comments