10 ತಿಂಗಳಿಂದ ಸಂಬಳ ಸಿಗದೇ ಬಿಎಸ್‍ಎನ್‍ಎಲ್ ಉದ್ಯೋಗಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ತಿರುವನಂತಪುರಂ,ನ.8 (ಪಿಟಿಐ)- ಕಳೆದ 10 ತಿಂಗಳಿನಿಂದ ವೇತನ ಸಿಗದಿರುವುದಕ್ಕೆ ಮನನೊಂದ ಬಿಎಸ್‍ಎನ್‍ಎಲ್ ನೌಕರರೊಬ್ಬರು ಟೆಲಿಫೋನ್ ಕಚೇರಿಯಲ್ಲೇ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಕುನ್ನಾಥ್ ರಾಮಕೃಷ್ಣನ್(52) ಮಲ್ಲಾಪುರಂನ ನೀಲಂಬುರ್‍ನಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿಯೊಂದರಲ್ಲಿ ಅರೆಕಾಲಿಕ ಸ್ವೀಪರ್ ಆಗಿ ಕಳೆದ 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.

ವಿಕಲಚೇತನರಾಗಿರುವ ರಾಮಕೃಷ್ಣನ್ ಅವರು ಅಂಗ ವೈಕಲ್ಯ ಕೋಟಾದಡಿ ಟೆಲಿಕಾಂ ಆಪರೇಟರ್‍ನೊಂದಿಗೆ ಅರೆಕಾಲಿಕ ಸ್ವೀಪರ್ ಆಗಿ ಮೂರು ದಶಕಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಕಳೆದ 10 ತಿಂಗಳಿನಿಂದ ರಾಮಕೃಷ್ಣನ್ ಅವರಿಗೆ ವೇತನ ಸಿಗದೆ ಇದ್ದ ಕಾರಣ ಚಿಂತಾಕ್ರಾಂತರಾಗಿದ್ದ ಅವರು ನಿನ್ನೆ ದೂರಾವಣಿ ವಿನಯಮ ಕೇಂದ್ರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮಕೃಷ್ಣ ಅವರು ಪ್ರತಿ ದಿನ 7 ಕಿ.ಮೀ ದೂರದಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿಗೆ ನಡೆದುಕೊಂಡೇ ಹೋಗುತ್ತಿದ್ದರು. ವೇತನ ಇಲ್ಲದಿರುವುದರಿಂದ ಸಾರಿಗೆ ವೆಚ್ಚವನ್ನೂ ಭರಿಸಲೂ ಸಹ ಆಗುತ್ತಿರಲಿಲ್ಲ. ಅಲ್ಲದೆ ಇನ್ನು ಮುಂದೆ ನಿಮಗೆ ವಾರದಲ್ಲಿ ಎರಡು ದಿನ ಮಾತ್ರ ಕೆಲಸ ಇರುವ ಸಾಧ್ಯತೆ ಇದೆ ಎಂದು ಟೆಲಿಕಾಮ್ ಆಪರೇಟರ್ ಸೂಚಿಸಿದ್ದರು ಎಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ.

ವೇತನ ಕೊಡದೆ ರಾಮಕೃಷ್ಣನ ಆತ್ಮಹತ್ಯೆ ಕಾರಣವಾಗಿರುವ ಬಿಎಸ್‍ಎನ್‍ಎಲ್ ವಿರುದ್ದ ಭಾರೀ ಆಕ್ರೋಶ ವ್ಯಕ್ತಪಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

Facebook Comments