ರಾಜಸ್ತಾನ ರಾಜಕೀಯ ನಾಟಕದಲ್ಲಿ ಹೊಸ ಟ್ವಿಸ್ಟ್..! ಬಿಎಸ್‍ಪಿ ಶಾಸಕರಿಗೆ ವಿಪ್

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ, ಜು.27-ರಾಜಸ್ತಾನದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದ್ದು, ಇಂದು ಮತ್ತೊಂದು ಬೆಳವಣಿಗೆ ಕಂಡಬಂದಿದೆ.

ರಾಜಸ್ತಾನ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭ ಉದ್ಭವಿಸಿದರೆ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ನೇತೃತ್ವದ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ತನ್ನ ಆರು ಶಾಸಕರಿಗೆ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ವಿಪ್ ಜಾರಿಗೊಳಿಸಿದೆ. ಇದರೊಂದಿಗೆ ರಾಜಸ್ತಾನ ರಾಜಕೀಯ ಬಿಕ್ಕಟ್ಟು ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ.

ಈ ಬೆಳವಣಿಗೆಯಿಂದ ಕಾಂಗ್ರೆಸ್‍ನೊಂದಿಗೆ ಈಗಾಗಲೇ ವಿಲೀನವಾಗಿದ್ದ ಬಿಎಸ್‍ಪಿ ಆರು ಶಾಸಕರು ಪಕ್ಷದ ವಿಪ್ ಪಾಲಿಸುವುದು ಅನಿವಾರ್ಯವಾಗಿದ್ದು, ಗೆಲ್ಹೋಟ್ ಅವರಿಗೆ ಇದರಿಂದ ಹಿನ್ನೆಡೆಯಾಗುವ ಸಾಧ್ಯತೆ ಇದೆ.

ಈ ಕುರಿತು ವಿಪ್ ಜಾರಿಗೊಳಿಸಿ ಹೇಳಿಕೆ ಬಿಡುಗಡೆ ಮಾಡಿರುವ ಬಿಎಸ್‍ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ,, ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ಬಹುಜನ ಸಮಾಜ ಪಕ್ಷದ ಎಲ್ಲ ಆರು ಶಾಸಕರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

ಬಿಎಸ್‍ಪಿ ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷ. ಭಾರತೀಯ ಸಂವಿಧಾನದ 10ನೇ ವಿಧಿಯ ನಾಲ್ಕನೇ ಪ್ಯಾರದಲ್ಲಿ ಉಲ್ಲೇಖಿಸಿರುವಂತೆ ರಾಜ್ಯಮಟ್ಟದಲ್ಲಿ ಯಾವುದೇ ಪಕ್ಷದೊಂದಿಗೆ ಬಿಎಸ್‍ಪಿ ವಿಲೀನ ಸಾಧ್ಯವಿಲ್ಲ.

ರಾಷ್ಟ್ರದ ಎಲ್ಲ ಕಡೆ ವಿಲೀನವಾಗದೇ ಬಿಎಸ್‍ಪಿಯ ಈ ಆರು ಶಾಸಕರು ಇತರ ಪಕ್ಷದ (ಕಾಂಗ್ರೆಸ್) ಜತೆ ವಿಲೀನ ಸಾಧ್ಯವಿಲ್ಲ ಎಂದು ನೋಟಿಸ್‍ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.
ಒಂದು ವೇಳೆ ಈ ಆರು ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿದ ಗೆಲ್ಹೋಟ್ ಸರ್ಕಾರದ ಪರವಾಗಿ ಮತ ಚಲಾಯಿಸಿದರೆ ವಿಧಾನಸಭೆಯಿಂದ ಅನರ್ಹರಾಗಲು ಕಾರಣರಾಗುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ ಬಿಎಸ್‍ಪಿ ಆರು ಶಾಸಕರಾದ ಸಂದೀಪ್ ಯಾದವ್, ವಾಜೀಬ್ ಅಲಿ, ದೀಪ್ ಚಂದ್ ಖೇರಿಯಾ, ಲಖನ್ ಮೀನಾ, ಜೋಗೇಂದ್ರ ಅವನಾ ಹಾಗೂ ರಾಜೇಂದ್ರ ಗುಧಾ ಅವರಿಗೆ ಪಕ್ಷ ವಿಪ್ ಜಾರಿಗೊಳಿಸಿದೆ. 2018ರ ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ಇವರೆಲ್ಲರೂ ಬಿಎಸ್‍ಪಿಯಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರು. .

Facebook Comments

Sri Raghav

Admin