ದುರ್ಬಲವಾದ ‘ಆನೆ’ಬಲದ ಮಾಯಾವತಿ..! 6 ಬಿಎಸ್‍ಪಿ ಶಾಸಕರು ಕಾಂಗ್ರೆಸ್‍ಗೆ ಜಂಪ್..!

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ್/ಲಕ್ನೋ, ಸೆ.18 (ಪಿಟಿಐ)- ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ರಾಜಸ್ತಾನದ ಎಲ್ಲ ಆರು ಬಹುಜನ ಸಮಾಜ ಪಕ್ಷ(ಬಿಎಸ್‍ಪಿ) ಶಾಸಕರು ಕಾಂಗ್ರೆಸ್ ಸೇರಿದ್ದಾರೆ. ಇದರಿಂದಾಗಿ ಪಕ್ಷದ ಪರಮೋಚ್ಚ ನಾಯಕಿ ಮತ್ತು ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರಿಗೆ ಭಾರೀ ಹಿನ್ನಡೆಯಾಗಿದೆ.

ಪಕ್ಷ ತೊರೆದಿರುವ ಎಲ್ಲ ಆರು ಶಾಸಕರು ಬಿಎಸ್‍ಪಿ ಶಾಸಕಾಂಗ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನ ಮಾಡುವಂತೆ ರಾಜಸ್ತಾನ ವಿಧಾನಸಭಾಧ್ಯಕ್ಷ ಸಿ.ಪಿ.ಜೋಷಿ ಅವರಿಗೆ ಪತ್ರ ನೀಡಿದ್ದಾರೆ. ಬಿಎಸ್‍ಪಿ ಶಾಸಕರು ತಮ್ಮನ್ನು ಭೇಟಿ ಮಾಡಿದ ಈ ಬಗ್ಗೆ ಪತ್ರ ನೀಡಿದ್ದಾರೆ ಎಂದು ಸ್ಪೀಕರ್ ಜೋಷಿ ತಿಳಿಸಿದ್ದಾರೆ.

ಶಾಸಕರಾದ ರಾಜೇಂದ್ರ ಸಿಂಗ್ ಗುಧಾ, ಜೋಗಿಂದರ್ ಸಿಂಗ್ ಅವಾನಾ, ವಾಜಿಬ್ ಅಲಿ, ಲಖನ್ ಸಿಂಗ್ ಮೀನಾ, ಸಂದೀಪ್ ಯಾದವ್ ಮತ್ತು ದೀಪಿಚಂದ್ ಈ ಬಗ್ಗೆ ಹೇಳಿಕೆ ನೀಡಿ ಶಾಸಕಾಂಗ ಪಕ್ಷವು ಕಾಂಗ್ರೆಸ್ ಜತೆ ವಿಲೀನವಾಗಲಿದೆ ಎಂದು ತಿಳಿಸಿದ್ದಾರೆ. ಈ ಎಲ್ಲ ಶಾಸಕರು ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಮತ್ತು ಕಾಂಗ್ರೆಸ್ ವರಿಷ್ಠರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

200 ಸದಸ್ಯ ಬಲದ ರಾಜಸ್ತಾನ ವಿಧಾನಸಭೆಯಲ್ಲಿ ಕಾಂಗ್ರೆಸ್ 100 ಶಾಸಕರನ್ನು ಹೊಂದಿತ್ತು. ಇದರ ಮಿತ್ರ ಪಕ್ಷ ರಾಷ್ಟ್ರೀಯ ಲೋಕ ದಳ ಒಂದು ಸ್ಥಾನ ಗೆದ್ದಿದೆ. 13 ಪಕ್ಷೇತರ ಶಾಸಕರಲ್ಲಿ 12 ಮಂದಿ ಕಾಂಗ್ರೆಸ್‍ಗೆ ಬಾಹ್ಯ ಬೆಂಬಲ ನೀಡಿದ್ದಾರೆ. ಎರಡು ಸ್ಥಾನಗಳು ತೆರವಾಗಿವೆ.  ಈಗ ಬಿಎಸ್‍ಪಿಯ ಆರು ಶಾಸಕರು ಕಾಂಗ್ರೆಸ್ ಜತೆ ವಿಲೀನವಾದರೆ ಪಕ್ಷದ ಬಲ 106ಕ್ಕೆ ಏರಲಿದೆ.

Facebook Comments