ಕಿಲ್ಲರ್ ಕೊರೊನಾ ನಿಯಂತ್ರಣಕ್ಕೆ ಪ್ಲಾಸ್ಟಿಕ್ ಬಬ್ಬಲ್‍ಗಳ ರೆಸ್ಟೋರೆಂಟ್

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಅ.18- ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ಜನರನ್ನು ರಕ್ಷಿಸಲು ವಿಶ್ವದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ನ್ಯೂಯಾರ್ಕ್‍ನ ರೆಸ್ಟೋರೆಂಟ್‍ನಲ್ಲಿ ಕೋವಿಡ್-19ನಿಂದ ಗ್ರಾಹಕರ ರಕ್ಷಣೆಗಾಗಿ ಗುಳ್ಳೆಯಾಕಾರದ ಪ್ಲಾಸ್ಟಿಕ್ ಕವಚಗಳನ್ನು ನಿರ್ಮಿಸಲಾಗಿದೆ.

ಅಮೆರಿಕದ ಗಗನಚುಂಬಿ ನಗರಿ ನ್ಯೂಯಾರ್ಕ್‍ನ ಮ್ಯಾನ್‍ಹಟ್ಟನ್‍ನಲ್ಲಿರುವ ಫ್ರೆಂಚ್ ರೆಸ್ಟೋರೆಂಟ್ ಕೆಫೆ ಡು ಸೊಲೆಲಿ ಈಗ ಹೋಟೆಲ್‍ಪ್ರಿಯರನ್ನು ವಿಶೇಷವಾಗಿ ಆಕರ್ಷಿಸುತ್ತಿದೆ. ಕಿಲ್ಲರ್ ಕೊರೊನಾ ವೈರಸ್ ಹಬ್ಬುವುದನ್ನು ತಡೆಗಟ್ಟಲು ಹಾಗೂ ಗ್ರಾಹಕರನ್ನು ಮಳೆ ಮತ್ತು ಹಿಮದಿಂದ ರಕ್ಷಿಸಲು 15 ಪ್ಲಾಸ್ಟಿಕ್ ಬಬ್ಬಲ್‍ಗಳನ್ನು ನಿರ್ಮಿಸಲಾಗಿದೆ.

ದೊಡ್ಡ ಗುಳ್ಳೆಯಾಕಾರದ ಈ ಪ್ಲಾಸ್ಟಿಕ್ ಕವಚದ ಮೂಲಕ ಈ ರೆಸ್ಟೋರೆಂಟ್ ಗ್ರಾಹಕರಿಗೆ ಕೊರೊನಾದಿಂದ ರಕ್ಷಣೆ ಒದಗಿಸಲಾಗುತ್ತಿದೆ ಎಂಬ ಬಗ್ಗೆ ಸ್ಥಳೀಯ ಟಿವಿ ಚಾನೆಲ್ ಎನ್‍ವೈ-1ರಲ್ಲಿ ಸುದ್ದಿ ಬಿತ್ತರವಾಗಿತ್ತು. ಆನಂತರ ಇಲ್ಲಿಗೆ ಭೇಟಿ ನೀಡುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ.

ಈ ವಿಶ್ವದಲ್ಲಿ ಏನೆಲ್ಲಾ ಪರಿಕಲ್ಪನೆಗಳು ಸೃಷ್ಟಿಯಾಗುತ್ತವೆ ಅಲ್ಲವೇ? ಪ್ಲಾಸ್ಟಿಕ್ ಬಬ್ಬಲ್ ಒಳಗೆ ಕುಳಿತು ಅಹಾರ ಸೇವಿಸುವುದು ನನಗೆ ಆದ ಅತ್ಯುತ್ತಮ ಅನುಭವಗಳಲ್ಲಿ ಒಂದು ಎನ್ನುತ್ತಾರೆ ತಮ್ಮ ಇಬ್ಬರು ಸಹೋದ್ಯೋಗಿಗಳೊಂದಿಗೆ ಕಾಫಿ ಸೇವಿಸಲು ಬಂದಿದ್ದ ವೆಲೇರಿ ವರ್ಥಿ.  ಇಲ್ಲಿ ಆರು ಅಡಿಗಳಷ್ಟು ಅಂತರವಿದೆ. ಈ ರೆಸ್ಟೋರೆಂಟ್‍ನಲ್ಲಿ ಎಲ್ಲವೂ ಸುರಕ್ಷಿತ ಮತ್ತು ಸ್ವಚ್ಚ. ಆಹಾರವೂ ಶುಚಿ-ರುಚಿಯಾಗಿದೆ ಎಂದು ಉದ್ಗರಿಸಿದರು ವಲೇರಿ.

ಕೊರೊನಾ ಹಾವಳಿ ಹಾಗೂ ಚಳಿಗಾಲ ಋತುವಿನಲ್ಲಿ ರೆಸ್ಟೋರೆಂಟ್‍ಗೆ ಗ್ರಾಹಕರನ್ನು ಆಕರ್ಷಿಸಲು ಕೆಫೆ ಡು ಸೊಲೆಲಿ ಮಾಲೀಕ ಅಲೈನ್ ಚೆವ್ರಿಯೂ ಅವರು ಚಿಂತಿಸುತ್ತಿದ್ದಾಗ ಜುಲೈನಲ್ಲಿ ಬಬ್ಬಲ್ ಬಗ್ಗೆ ಇಂಟರ್‍ನೆಟ್‍ನಲ್ಲಿ ಮಾಹಿತಿ ಲಭಿಸಿತು. ತಕ್ಷಣ ಅವರು ಕಾರ್ಯಪ್ರವೃತ್ತರಾಗಿ ಸ್ಪೇಸ್ ಬಬ್ಬಲ್‍ಗಳನ್ನು ನಿರ್ಮಿಸಿದರು.

15 ವರ್ಷಗಳ ಹಿಂದೆ ನ್ಯೂಯಾರ್ಕ್‍ನಲ್ಲಿ ಸ್ಥಾಪನೆಯಾದ ಈ ರೆಸ್ಟೋರೆಂಟ್ ಈಗ ಬಬ್ಬಲ್‍ಗಳಿಂದ ಮತ್ತಷ್ಟು ಜನಪ್ರಿಯಾಗಿದೆ. ಇಲ್ಲಿ ಒಟ್ಟು 15 ಬಬ್ಬಲ್‍ಗಳಿದ್ದು, ಒಂದು ಪ್ಲಾಸಿಕ್ ಕವಚಕ್ಕೆ 400 ಡಾಲರ್ ಖರ್ಚು ಮಾಡಿದ್ದಾರೆ. ಈ ಹೂಡಿಕೆಯಿಂದ ಲಾಭವಾಗುತ್ತಿದೆ ಎನ್ನುತ್ತಾರೆ ಅಲೈನ್.

Facebook Comments