ಕೊರೊನಾ, ಜಿ-4 ವೈರಸ್ ಬೆನ್ನಲ್ಲೇ ಚೀನಾದಲ್ಲಿ ಡೆಡ್ಲಿ ಬುಬೋನಿಕ್ ಪ್ಲೇಗ್ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಜು.6-ಇಡೀ ವಿಶ್ವಕ್ಕೆ ಕಿಲ್ಲರ್ ಕೊರೊನಾ ವೈರಸ್ ಕೊಡುಗೆಯಾಗಿ ನೀಡಿ ವ್ಯಾಪಕ ಸೋಂಕು ಮತ್ತು ಸಾವಿಗೆ ಕಾರಣವಾದ ಚೀನಾದಲ್ಲಿ ಜಿ-4 ಎಂಬ ಮಾರಕ ಹಂದಿಜ್ವರ ಪತ್ತೆಯಾದ ಬೆನ್ನಲ್ಲೇ ಕಮ್ಯುನಿಸ್ಟ್ ದೇಶದಲ್ಲಿ ಈಗ ಮತ್ತೊಂದು ಭಯಾನಕ ಸಾಂಕ್ರಾಮಿಕ ರೋಗದ ಭೀತಿ ಶುರುವಾಗಿದೆ.

ಚೀನಾದ ಮಂಗೋಲಿಯಾ ಸ್ವಾಯತ್ತೆ ಪ್ರಾಂತ್ಯದ ಒಳಪ್ರದೇಶದಲ್ಲಿರುವ ಬಯನ್ನೂರ್ ಎಂಬ ಪಟ್ಟಣದಲ್ಲಿ ಪ್ರಾಣಿಗಳಿಂದ ಮನುಷ್ಯನಿಗೆ ಹಬ್ಬುವ ಡೆಡ್ಲಿ ಬಬೋನಿಕ್ ಪ್ರಕರಣಗಳು ಪತ್ತೆಯಾಗಿದ್ದು, ಈಗಾಗಲೇ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದು ವೈರಸ್‍ನಂತೆ ಮಾನವರಿಂದ ಮಾನವರಿಗೆ ಹಬ್ಬುವ ಆತಂಕವಿದೆ. ಅಲ್ಲದೆ, ಈ ವರ್ಷಾಂತ್ಯದವರೆಗೂ ಈ ಸಾಂಕ್ರಾಮಿಕ ಸೋಂಕಿನ ಬೀತಿ ಇದೆ ಎಂದು ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬಯನ್ನೂರು ಮತ್ತು ಸುತ್ತಮತ್ತಲ ಪ್ರದೇಶಗಳು ಮತ್ತು ಇತರ ಪ್ರಾಂತ್ಯಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ.  ಕಾಡು ಇಲಿ, ಹೆಗ್ಗಣದಂಥ ದಂಶಕಗಳಲ್ಲಿ ಕಂಡುಬರುವ ಚಿಕ್ಕ ಕೀಟಗಳಲ್ಲಿರುವ ಬ್ಯಾಕ್ಟೀರಿಯಾಗಳಿಂದ ಈ ರೋಗ ಹರಡುವುದು ದೃಢಪಟ್ಟಿದೆ. ಮುನ್ನೆಚ್ಚರಿಕೆ ವಹಿಸದಿದ್ದರೆ ಗಂಡಾಂತರ ತಪ್ಪಿದ್ದಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

Facebook Comments