ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ, ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.5- ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತು 19 ಮಂದಿ ಸಾವನ್ನಪ್ಪಿದ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಘಟನೆ ಇಂದು ಮುಂಜಾನೆ 4.30ರ ಸುಮಾರಿಗೆ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಗಳನ್ನು ಬಿಹಾರ ಮೂಲದ ರಾಕೇಶ್ ಹಾಗೂ ರಾಹುಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಬಹುತೇಕ ಬಿಹಾರ ಮೂಲದ ಕಾರ್ಮಿಕರೇ ತೊಡಗಿದ್ದರು ಎನ್ನಲಾಗಿದೆ.

ಎಪಿಎಂಸಿಯಿಂದ ವಾಹನ ನಿಲುಗಡೆಗೆ ನಾಲ್ಕು ಮಹಡಿಯ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಮಣ್ಣಿನ ಮೇಲೆ ಸೆಂಟ್ರಿಂಗ್ ಅಳವಡಿಸಲಾಗಿತ್ತು. ಕಾರ್ಮಿಕರು ಎರಡನೆ ಮಹಡಿಗೆ ಕಾಂಕ್ರೀಟ್ ಹಾಕುವ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಸೆಂಟ್ರಿಂಗ್ ತಳಭಾಗದ ಮಣ್ಣು ಕುಸಿದು ಈ ದುರ್ಘಟನೆ ಸಂಭವಿಸಿದೆ.

ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಸುಮಾರು ಹತ್ತಾರು ಜನ ತೊಡಗಿಕೊಂಡಿದ್ದರು ಎನ್ನಲಾಗಿದ್ದು, ಅವಶೇಷಗಳಡಿ ಹಲವರು ಸಿಲುಕಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರಂತ ಸಂಬಂಧ ಇಂಜಿನಿಯರ್ ಉಮಾಶಂಕರ್ ಮತ್ತು ಗುತ್ತಿಗೆದಾರ ಚಂದ್ರು ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆರ್‍ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin