ಕಟ್ಟಡ ಕಾರ್ಮಿಕರಿಗೆ ಉಚಿತ ವಾರ್ಷಿಕ ಬಸ್ ಪಾಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.19- ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆಯು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಹಯೋಗದೊಂದಿಗೆ ನೋಂದಾಯಿತ ಕಾರ್ಮಿಕರಿಗೆ ವಾರ್ಷಿಕ ಉಚಿತ ಸಹಾಯಹಸ್ತ ಬಸ್‍ಪಾಸ್ ವಿತರಿಸುತ್ತಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರಿಗೆ ನೀಡುವ ಸಹಾಯಹಸ್ತ ಪಾಸಿನ ಮಾನ್ಯತಾ ಅವಧಿ ಗರಿಷ್ಠ ಒಂದು ವರ್ಷ ಅವಧಿಯಾಗಿರುತ್ತದೆ.

ಈ ಪಾಸ್‍ಗೆ ವಾರ್ಷಿಕ 12,600ರೂ.ಗಳಾಗಿದ್ದು, ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ. ಪಾಸಿನ ವೆಚ್ಚವನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಭರಿಸಲಾಗುತ್ತಿದೆ. ಈ ಪಾಸನ್ನು ಹೊಂದಿದ ಕಾರ್ಮಿಕರು ಬಿಎಂಟಿಸಿಯ ಎಲ್ಲ ಸಾಮಾನ್ಯ ಬಸ್‍ಗಳಲ್ಲಿ ಅಪರಿಮಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಸಹಾಯಹಸ್ತ ಪಾಸ್ ಹೊಂದಿದ ಕಾರ್ಮಿಕರು ವಾಹನ ಅಪಘಾತದಲ್ಲಿ ಮೃತರಾದಲ್ಲಿ ಬಿಎಂಟಿಸಿ ವತಿಯಿಂದ ವಿಮಾ ಸೌಲಭ್ಯ ಸಹ ಕಲ್ಪಿಸಲಾಗಿದೆ. ಬಿಎಂಟಿಸಿ ಈಗಾಗಲೇ 3058 ಸಹಾಯಹಸ್ತ ಪಾಸ್‍ಗಳನ್ನು ವಿತರಣೆ ಮಾಡಿದೆ. ಪ್ರಸ್ತುತ ಸೇವಾ ಸಿಂಧು ಯೋಜನೆಯಡಿಯ ಮುಖಾಂತರ ಕಟ್ಟಡ ಕಾರ್ಮಿಕರು ಮಂಡಳಿಯಲ್ಲಿ 7000 ಮಂದಿ ನೋಂದಣಿಯಾಗಿದ್ದಾರೆ.

ಸದರಿ 7000 ಕಾರ್ಮಿಕರಿಗೂ ಜನವರಿ ಅಂತ್ಯದೊಳಗೆ ಪಾಸ್‍ಗಳನ್ನು ವಿತರಣೆ ಮಾಡ ಲಿದೆ. ಪಾಸ್ ಪಡೆಯಲು ಕಟ್ಟಡ ಕಾರ್ಮಿಕರು ನೋಂದಣಿಯಾಗಿರುವ ಗುರುತಿನ ಚೀಟಿ, ಎರಡು ಸ್ಟಾಂಪ್‍ಸೈಜ್ ಅಳತೆಯ ಭಾವಚಿತ್ರ ನೀಡಿ ಪಾಸ್ ಪಡೆಯಬಹುದು. ಯಲಹಂಕ ಹಳೇ ಬಸ್ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಬನಶಂಕರಿ, ದೊಮ್ಮಲೂರು, ಶಿವಾಜಿನಗರ, ಯಶವಂತಪುರ, ಜಯನಗರ, ಕೋರಮಂಗಲ, ಹೊಸಕೋಟೆ, ಕೆಂಗೇರಿ, ವಿಜಯನಗರ, ವೈಟ್‍ಫೀಲ್ಡ್ ಬಸ್ ನಿಲ್ದಾಣಗಳಲ್ಲಿ ಪಾಸ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.

Facebook Comments