ಅಕ್ರಮವಾಗಿ ಪಿಸ್ತೂಲು, ಗುಂಡು ಮಾರಾಟ ಮಾಡುತ್ತಿದ್ದ 8 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.1- ರಾಜಸ್ಥಾನ ಮತ್ತು ಮುಜಾಫರ್ ನಗರದಿಂದ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ತರಿಸಿಕೊಂಡು ನಗರದಲ್ಲಿ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆಹಚ್ಚಿರುವ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು 8 ಮಂದಿಯನ್ನು ಬಂಧಿಸಿ 13 ಪಿಸ್ತೂಲುಗಳು ಮತ್ತು 52 ಜೀವಂತ ಮದ್ದು, ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರ್.ಕೆ.ಹೆಗ್ಗಡೆ ನಗರದ ಕದೀರ್‍ಖಾನ್ (32), ಫೈಯಾಜ್‍ಜುಲ್ಲಾ ಖಾನ್ (31), ತಮಿಳುನಾಡಿನ ವಿನಯ್ (29), ಉತ್ತರಪ್ರದೇಶದ ಪರಾಗ್‍ಕುಮಾರ್ (39), ಗುಜರಾತ್‍ನ ಶಹನವಾಜ್ ಅನ್ಸಾರಿ (29), ಮಧ್ಯಪ್ರದೇಶದ ನಾಸಿರ್‍ಶೇಖ್ (50), ಸಲ್ಮಾನ್‍ಖಾನ್ (28) ಮತ್ತು ಫಕ್ರುದ್ದೀನ್ (37) ಬಂಧಿತ ಆರೋಪಿಗಳು.

ಜನವರಿ 29 ರಂದು ಜಿ.ಪಿ.ಸ್ಟ್ರೀಟ್‍ನಲ್ಲಿರುವ ಹೊಟೇಲ್ ಕೊನಾರ್ಕ್ ರೆಸಿಡೆನ್ಸಿ ಎಂಬ ಲಾಡ್ಜ್‍ನಲ್ಲಿ ವ್ಯಕ್ತಿಯೊಬ್ಬ ಅಕ್ರಮವಾಗಿ ಪಿಸ್ತೂಲು ಮತ್ತು ಜೀವಂತ ಮದ್ದುಗುಂಡುಗಳನ್ನು ಇಟ್ಟುಕೊಂಡು ಅವುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಕುಮಾರಸ್ವಾಮಿ ಅವರಿಗೆ ಖಚಿತ ಮಾಹಿತಿ ಬಂದಿದೆ.

ತಕ್ಷಣ ಇನ್ಸ್‍ಪೆಕ್ಟರ್ ಅವರು ಸಿಬ್ಬಂದಿಯೊಂದಿಗೆ ಲಾಡ್ಜ್‍ಗೆ ತೆರಳಿ ಆರೋಪಿ ಕದೀರ್‍ಖಾನ್‍ನನ್ನು ಬಂಧಿಸಿ ಆತನ ಬಳಿಯಿದ್ದ 2 ಪಿಸ್ತೂಲು ಹಾಗೂ 8 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡು ತೀವ್ರ ವಿಚಾರಣೆಗೊಳಪಡಿಸಿ ಉಳಿದ 7 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಾಗಾಣಿಕೆ ಮಾಡುತ್ತಿದ್ದು ತಿಳಿದು ಬಂದಿದ್ದು, ಆರೋಪಿಗಳಿಂದ 13 ಪಿಸ್ತೂಲುಗಳು ಮತ್ತು 52 ಜೀವಂತ ಮದ್ದುಗುಂಡುಗಳನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಪೈಯಾಜುಲ್ಲಾಖಾನ್ ವಿರುದ್ಧ ಈಗಾಗಲೇ ಸಂಪಿಂಗೆಹಳ್ಳಿ ಪೆÇಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ ಹಾಗೂ ಬಾಗಲೂರು ಠಾಣೆಯಲ್ಲಿ ಅಕ್ರಮ ಸಶ್ತ್ರಾಸ್ತ ಹೊಂದಿದ್ದ ಪ್ರಕರಣ ದಾಖಲಾಗಿರುತ್ತವೆ.

ಆರೋಪಿಗಳು ರಾಜಸ್ಥಾನ ಮತ್ತು ಮುಜಾಫರ್ ನಗರದಿಂದ ಶಾಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ತರಿಸಿ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Facebook Comments