ಬುರೇವಿ ಚಂಡಮಾರುತದ ಎಫೆಕ್ಟ್ : ರಾಜ್ಯದಲ್ಲಿ ನಾಳೆಯವರೆಗೂ ಮಳೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.3- ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಬುರೇವಿ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಬೆಳಗ್ಗೆಯಿಂದಲೇ ಹಗುರ ಮಳೆ ಆರಂಭವಾಗಿದೆ. ಇಂದು ಬೆಳಗ್ಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ತುಂತುರು ಮಳೆ ಆರಂಭವಾಗಿ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವವರಿಗೆ ತೊಂದರೆಯಾಯಿತು.

ಜಿಟಿಜಿಟಿ ಮಳೆಯ ನಡುವೆಯೇ ಕೊಡೆ, ರೈನ್‍ಕೋರ್ಟ್‍ಗಳ ಆಶ್ರಯ ಪಡೆದು ದೈನಂದಿನ ಕೆಲಸಗಳಿಗೆ ಸಾರ್ವಜನಿರು ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತು. ನಾಳೆ ಸಂಜೆಯವರೆಗೂ ಮೋಡಕವಿದ ವಾತಾವರಣವಿರಲಿದ್ದು, ಚದುರಿದಂತೆ ಅಲ್ಲಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆಗಳಿವೆ.

ಬುರೇವಿ ಚಂಡಮಾರುತವು ಈಗಾಗಲೇ ಶ್ರೀಲಂಕಾದಲ್ಲಿ ಭೂ ಸ್ಪರ್ಶವಾಗಿದ್ದು, ದುರ್ಬಲಗೊಳ್ಳುತ್ತಿದೆ. ಹೀಗಾಗಿ ಇದರ ನೇರ ಪರಿಣಾಮ ರಾಜ್ಯದ ಮೇಲೆ ಆಗುವುದಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ಚಂಡಮಾರುತ ಸಾಗುವ ಪಥÀದಲ್ಲಿ ನಮ್ಮ ರಾಜ್ಯ ಕಂಡು ಬರುತ್ತಿಲ್ಲ . ಆದರೂ ಪರೋಕ್ಷ ಪರಿಣಾಮದಿಂದ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇನ್ನೆರಡು ದಿನ ತುಂತುರು ಮಳೆ ಯಾಗಲಿದೆ. ಶನಿವಾರದ ನಂತರ ವಾತಾವರಣ ಸಾಮಾನ್ಯ ಸ್ಥಿತಿಗೆ ತೆರಳುವ ನಿರೀಕ್ಷೆ ಇದೆ ಎಂದು ಹೇಳಿದರು.

ಶ್ರೀಲಂಕಾ, ತಮಿಳುನಾಡಿನ ದಕ್ಷಿಣ ಭಾಗ ಹಾಗೂ ಕೇರಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಈಗಾಗಲೇ ಚಂಡಮಾರುತ ಭೂ ಸ್ಪರ್ಶವಾಗಿರುವುದರಿಂದ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ ಎಂದರು. ಇಂದು ಬೆಳಗ್ಗೆಯಿಂದಲೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಹವಾಮಾನ ತಜ್ಞ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಉತ್ತರ ಒಳನಾಡಿನಲ್ಲೂ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಇಂದು ಮತ್ತು ನಾಳೆ ಮಾತ್ರ ತುಂತುರು ಮಳೆಯಾಗಲಿದ್ದು, ಭಾರೀ ಮಳೆಯಾಗುವ ಮುನ್ಸೂಚನೆಗಳು ಕಂಡು ಬರುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Facebook Comments