ಪ್ರತಿ ಗ್ರಾಮಕ್ಕೊಂದು ಸ್ಮಶಾನಕ್ಕಾಗಿ ಭೂಮಿ ಖರೀದಿ : ಸಚಿವ ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.15- ರಾಜ್ಯಾದ್ಯಂತ ಗ್ರಾಮಕ್ಕೊಂದರಂತೆ ಸ್ಮಶಾನ ಇರಬೇಕು. ಎಲ್ಲೆಲ್ಲಿ ಸ್ಮಶಾನ ಇಲ್ಲವೋ ಅಲ್ಲಿನ ಜಿಲ್ಲಾಧಿಕಾರಿಗಳ ಮೂಲಕ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.ವಿಧಾನ ಪರಿಷತ್‍ನಲ್ಲಿ ಮಹಂತೇಶ ಕವಟಗಿ ಮಠ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಗ್ರಾಮಕ್ಕೊಂದು ಸ್ಮಶಾನ ಇರಬೇಕು. ಇದಕ್ಕಾಗಿ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ 26 ಕೋಟಿ ಬಿಡುಗಡೆ ಮಾಡಿದೆ.

ರಾಜ್ಯದ 372 ತಾಲ್ಲೂಕುಗಳಲ್ಲಿ ಸ್ಮಶಾನ ಇಲ್ಲ ಎಂಬ ವರದಿ ಇದೆ. ಸರ್ಕಾರ ಹಣ ನೀಡುತ್ತದೆ. ಆದರೆ ಕೃಷಿ ಭೂಮಿಯ ಬೆಲೆ ಹೆಚ್ಚಿರುವುದರಿಂದ, ಸರ್ಕಾರ ನಿಗದಿ ಮಾಡಿರುವ ದರದಲ್ಲಿ ಜಾಗ ಖರೀದಿ ಮಾಡಲಾಗುತ್ತಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿಗಳಿಂದ ವಿಶೇಷ ಪ್ರಸ್ತಾವನೆ ಪಡೆದು ಹೆಚ್ಚುವರಿ ಹಣ ನೀಡಿ, ಸ್ಮಶಾನಕ್ಕಾಗಿ ಭೂಮಿ ಖರೀದಿ ಮಾಡಲಾಗುವುದು ಎಂದರು.

ಬೆಳಗಾವಿ ಜಿಲ್ಲೆಯಲ್ಲಿ 816 ಸ್ಮಶಾನಗಳಿವೆ, 372 ಗ್ರಾಮಗಳಲ್ಲಿ ಸ್ಮಶಾನ ಇಲ್ಲ. ಬೆಳಗಾವಿ, ಹುಕ್ಕೇರಿಯಲ್ಲಿ ಎರಡು ಗ್ರಾಮಗಳಲ್ಲಿ ಮಾತ್ರ ಸ್ಮಶಾನ ಇಲ್ಲ. ಉಳಿದಂತೆ ಖಾನಾಪುರದಲ್ಲಿ ಸಮಸ್ಯೆ ಇದೆ. ಅಲ್ಲಿಂದ ವಿಶೇಷ ಪ್ರಸ್ತಾವನೆ ಪಡೆದು ಸ್ಮಶಾನ ಭೂಮಿ ಒಗದಿಸುವುದಾಗಿ ಸಚಿವರು ಹೇಳಿದರು.

ಕಾಂಗ್ರೆಸ್‍ನ ಸದಸ್ಯ ಪ್ರಕಾಶ್ ರಾಥೋಡ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಆರ್.ಅಶೋಕ್ ಅವರು, ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಬ್ಯಾಡರಹಳ್ಳಿ, ಬಸವನಗೌಡದೊಡ್ಡಿ, ದಾಲನಕಟ್ಟಿ ಲಂಬಾಣಿ ತಾಂಡ ಇದೆ.

ಅದು ಅರಣ್ಯ ಭೂಮಿ ಎಂದು ಈ ಮೊದಲು ಅಸೂಚನೆಯಾಗಿದೆ. ಅರಣ್ಯ ಕಾಯ್ದೆ ಅಡಿ ಗ್ರಾಮ ಪಂಚಾಯತ್ ಹಕ್ಕು ಸಮಿತಿಯಲ್ಲಿ ಫಲಾನುಭವಿಗಳಿಗೆ ನೀಡಬೇಕು ಎಂದು ತೀರ್ಮಾನವಾಗಿದೆ. ಮುಂದಿನ ಹಂತದಲ್ಲಿ ಉಪವಿಭಾಗಾಕಾರಿ ಸೂಚನೆ ನೀಡಿ ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲಾಗುವುದು ಎಂದರು.

ರಾಜ್ಯದಲ್ಲಿ 1400 ಕಂದಾಯ ಗ್ರಾಮಗಳಿಗೆ ನೋಟಿಫಿಕೇಷನ್ ಮಾಡಿ, 803 ಗಾಮಗಳಿಗೆ ಅಸೂಚನೆಯಾಗಿದೆ. ಕಂದಾಯ ಗ್ರಾಮಗಳ ಘೋಷಣೆ ಸರ್ಕಾರದ ಆಧ್ಯತೆಯಾಗಿದೆ. ಕಳೆದ ಎರಡು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಲಾಗಿದೆ ಎಂದರು.

ನಜೀರ್ ಅಹಮ್ಮದ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಂದಾಯ ಇಲಾಖೆಯಲ್ಲಿ ಲೆಕ್ಕಾಕಾರಿಗಳು ಮತ್ತು ದ್ವಿತೀಯ ದರ್ಜೆ ಸಹಾಯಕರ ವೇತನವೂ ಒಂದೇ ಆಗಿದೆ. ಎರಡು ವೃಂದದ ಜೇಷ್ಠತಾ ಪಟ್ಟಿ ತಯಾರಿಸಿ ಪ್ರಕಟಿಸಲಾಗಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಶೀಘ್ರವೇ ಬಡ್ತಿ ನೀಡಲಾಗುವುದು ಎಂದು ಹೇಳಿದರು.

Facebook Comments

Sri Raghav

Admin