ಹಿರಿಯೂರು ಬಳಿ ಹೊತ್ತಿ ಉರಿದ ಬಸ್, ಐವರ ಸಜೀವ ದಹನ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ/ತುಮಕೂರು,ಆ.12- ಬಿಜಾಪುರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್‍ನಲ್ಲಿ ಅಗ್ನಿ ಅವಘಡ ಸಂಭವಿಸಿ ಮೂವರು ಮಕ್ಕಳು ಸೇರಿದಂತೆ ಐದು ಮಂದಿ ಸಜೀವ ದಹನವಾಗಿರುವ ದಾರುಣ ಘಟನೆ ಇಂದು ಮುಂಜಾನೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಿಶ್ಚಿತ(3), ಶ್ವೇತ(5), ಸಮೃದ್ದಿ(8), ಶ್ವೇತಾ(33), ಕವಿತ(23) ಮೃತಪಟ್ಟ ದುರ್ದೈವಿಗಳು. ಬೆಂಕಿಯ ತೀವ್ರತೆಗೆ ಐವರ ದೇಹಗಳು ಸುಟ್ಟು ಕರಕಲಾಗಿದೆ.

ರಾತ್ರಿ ಬಿಜಾಪುರದಿಂದ ಬೆಂಗಳೂರಿಗೆ ಹೊರಟಿದ್ದ ಕುಕ್ಕೆ ಶ್ರೀ ಟ್ರಾವಲ್ಸ್‍ಗೆ ಸೇರಿದ ಖಾಸಗಿ ಬಸ್‍ನಲ್ಲಿ 32 ಮಂದಿ ಪ್ರಯಾಣಿಸುತ್ತಿದ್ದರು. ಬೆಳಗಿನ ಜಾವ 3.30ರ ಸುಮಾರಿನಲ್ಲಿ ಈ ಬಸ್ ರಾಷ್ಟ್ರೀಯ ಹೆದ್ದಾರಿ 4ರ ಹಿರಿಯೂರು ತಾಲ್ಲೂಕಿನ ಕಸ್ತೂರಿ ರಂಗಪ್ಪನಹಳ್ಳಿ(ಕೆ.ಆರ್.ಹಳ್ಳಿ) ಬಳಿ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಎಚ್ಚರಗೊಂಡ ಮಹಿಳೆಯರು ಸಹಾಯಕ್ಕಾಗಿ ಕೂಗಲಾರಂಭಿಸಿದ್ದಾರೆ.

ತಕ್ಷಣ ಬಸನ್ನು ರಸ್ತೆಬದಿ ನಿಲ್ಲಿಸಿದ ಬಸ್ ಚಾಲಕ ಮತ್ತು ಕಂಡಕ್ಟರ್ ಪ್ರಯಾಣಿಕರನ್ನು ರಕ್ಷಿಸುವ ಕೆಲಸ ಮಾಡದೆ ಕೆಳಗಿಳಿದು ಪರಾರಿಯಾಗಿದ್ದಾರೆ.

ಬಸ್‍ನಲ್ಲಿದ್ದವರು ಬೆಂಕಿ ವ್ಯಾಪಿಸುತ್ತಿದ್ದಂತೆ ಕಿಟಕಿಯ ಗಾಜು ಒಡೆದು ಹಲವರು ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಘಟನೆಯಲ್ಲಿ 27 ಮಂದಿ ಗಂಭೀರ ಗಾಯಗೊಂಡಿದ್ದು, ಇವರನ್ನು ಹಿರಿಯೂರು ಹಾಗೂ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

ಸುದ್ದಿ ತಿಳಿದು ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾದರೂ ನೋಡನೋಡುತ್ತಿದ್ದಂತೆ ಬೆಂಕಿ ಬಸ್ ಪೂರ್ತಿ ಆವರಿಸಿಕೊಂಡಿದ್ದರಿಂದ ಮಗು ಸೇರಿ ಐವರು ಬಸ್‍ನೊಳಗೆ ಸಜೀವ ದಹನವಾಗಿದ್ದಾರೆ.

ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಪಡಬೇಕಾಯಿತು. ಬಸ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಐವರ ತಲೆಬುರಡೆಗಳು ಮಾತ್ರ ಪತ್ತೆಯಾಗಿವೆ.

ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತರ ಮಾಹಿತಿ ಕಲೆಹಾಕುತ್ತಿದ್ದಾರೆ. ಪೊಲೀಸರು ಬಸ್ ಚಾಲಕ ಹಾಗೂ ನಿರ್ವಾಹಕನಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments

Sri Raghav

Admin