ಬಸ್‍ಗೆ ಬೆಂಕಿ ಪ್ರಯಾಣಿಕರು ಪಾರು..

ಈ ಸುದ್ದಿಯನ್ನು ಶೇರ್ ಮಾಡಿ

ಬೀದರ್, ಸೆ.3-ಚಲಿಸುತ್ತಿದ್ದ ಬಸ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದರೂ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ಸಮೀಪ ನಡೆದಿದೆ.

ಬೀದರ್‍ನಿಂದ ಕಲಬುರಗಿ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ಧುಮ್ಮನಸೂರು ಗ್ರಾಮದ ಬಳಿ ಸಂಚರಿಸುತ್ತಿದ್ದಾಗ ಬಸ್‍ನ ಇಂಜಿನ್‍ನಲ್ಲಿ ಉಂಟಾದ ತಾಂತ್ರಿಕ ದೋಷದಂದಾಗಿ ಹೊತ್ತಿ ಉರಿದಿದೆ, ಬೆಂಕಿ ಕೆನ್ನಾಲಿಗೆ ಚಾಚುತ್ತಿದ್ದಂತೆ ಬಸ್‍ನಲ್ಲಿದ್ದ ಪ್ರಯಾಣಿಕರು ಚೀರಾಡ ತೊಡಗಿದ್ದಾರೆ.

ಬಸ್‍ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ರೋಡ್ ಬ್ರೇಕರ್ ಬಳಿ ಜಂಪ್ ಆಗಿದ್ದೇ ಕಾರಣ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಬಸ್‍ನ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಚಾಲಕ ಬಸ್ಸಿನಲ್ಲಿದ್ದ 17 ಪ್ರಯಾಣಿಕರನ್ನು ಕೆಳಗಿಳಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ಸುದ್ದಿ ತಿಳಿದು ಸ್ಥಳಕ್ಕೆ ಎರಡು ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಲು ಶ್ರಮಪಟ್ಟರಾದರೂ ಅಷ್ಟರೊಳಗೆ ಬಸ್ಸು ಸಂಪೂರ್ಣವಾಗಿ ಭಸ್ಮವಾಗಿತ್ತು. ಹುಮ್ನಾಬಾದ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments